ADVERTISEMENT

ಸಂಕಷ್ಟದಲ್ಲಿ ರೈತರ ಕೈ ಹಿಡಿದ ‘ಕಾವೇರಿ’ ತಳಿಯ ನಾಟಿ ಕೋಳಿ

ಕೊರೊನಾ ಸಂದರ್ಭದಲ್ಲಿ ಹೆಚ್ಚಿದ ಬೇಡಿಕೆ

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 2 ಜನವರಿ 2021, 2:09 IST
Last Updated 2 ಜನವರಿ 2021, 2:09 IST
ಕಾವೇರಿ ನಾಟಿ ಕೋಳಿಯ ತಳಿ
ಕಾವೇರಿ ನಾಟಿ ಕೋಳಿಯ ತಳಿ   

ಹೆಸರಘಟ್ಟ: ಗ್ರಾಮದಲ್ಲಿರುವ ಕೇಂದ್ರಿಯ ಕುಕ್ಕುಟ ಅಭಿವೃದ್ದಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ನಾಟಿ ಕೋಳಿಯ ತಳಿ ’ಕಾವೇರಿ‘ಗೆ ಕೊರೊನಾ ಸಂಕಷ್ಟದಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ.

‘ಐದು ವರ್ಷಗಳ ಹಿಂದೆ ಅಭಿವೃದ್ಧಿ ಮಾಡಿದ ಈ ತಳಿ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಬಹುಬೇಡಿಕೆ ಸಂಪಾದಿಸಿತ್ತು. ನಮ್ಮ ರಾಜ್ಯದ ರೈತರು ಸಾಕಣೆಯಲ್ಲಿ ಹಿಂದೆ ಬಿದ್ದರು. ಆದರೆ, ಕೊರೊನಾ ಸಮಯದಲ್ಲಿ ಹೆಚ್ಚಿನ ಮರಿಗಳನ್ನು ಸಾಕಿ ಕೈ ತುಂಬಾ ಸಂಪಾದನೆ ಮಾಡಿದ್ದಾರೆ’ ಎನ್ನುತ್ತಾರೆ ಸಂಸ್ಥೆಯ ಜಂಟಿ ಆಯುಕ್ತ ಮಹೇಶ್.

‘ಕಾವೇರಿ ನಾಟಿಕೋಳಿಯು ಬಹುವರ್ಣದಿಂದ ಕೂಡಿದೆ. ಹದ್ದಿನ ಕಣ್ಣಿಗೆ ಬೀಳುವುದಿಲ್ಲ. ಮರಿಗಳು ಸುರಕ್ಷಿತವಾಗಿ ಇರುತ್ತವೆ. ಬೆಕ್ಕು, ನಾಯಿಗಳಿಂದ ಹಾರಾಡಿ ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಈ ತಳಿಯ ಕೋಳಿಗೆ ಇರುತ್ತದೆ. ಅಲ್ಲದೇ ನಾಲ್ಕು ತಿಂಗಳ ಕೋಳಿಯಲ್ಲಿ ಎರಡು ಕೆ.ಜಿ.ಯಷ್ಟು ಮಾಂಸ ಲಭ್ಯವಾಗುತ್ತದೆ’ ಎನ್ನುತ್ತಾರೆ ಅವರು.

ADVERTISEMENT

‘ಕಾವೇರಿ ತಳಿಯ ನಾಟಿಕೋಳಿಯು ಎರಡು ದಿನಕ್ಕೆ ಒಂದರಂತೆ ವರ್ಷದಲ್ಲಿ 150 ರಿಂದ 180 ಮೊಟ್ಟೆಗಳನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ಹತ್ತು ರೂಪಾಯಿ ಬೆಲೆ ಇದ್ದು, ರೈತರಿಗೆ ಹೆಚ್ಚಿನ ಲಾಭವನ್ನು ಇದು ನೀಡುತ್ತದೆ. ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಮನೆಗಳಲ್ಲಿ ಲಭ್ಯವಿರುವ ಚಿಕ್ಕ ಜಾಗದಲ್ಲಿ ಇಟ್ಟಿಗೆ ಮತ್ತು ಪ್ಲಾಸ್ಟಿಕ್‌ ಇಲ್ಲವೇ ಬಿದಿರಿನ ಕೋಲುಗಳಿಂದ ಕೋಳಿ ಸಾಕಣೆಗೆ ಶೆಡ್‌ಗಳನ್ನು ನಿರ್ಮಿಸಬಹುದು. ಇದಕ್ಕೆ ಸುಮಾರು ಐದರಿಂದ ಆರು ಸಾವಿರ ರೂಪಾಯಿ ಖರ್ಚಾಗಬಹುದು. ಒಂದು ಶೆಡ್‍ನಲ್ಲಿ 25 ಕೋಳಿಗಳನ್ನು ಸಾಕಿದರೆ ದಿನಕ್ಕೆ₹ 200 ದುಡಿಯಬಹುದು’ ಎಂದು ಅವರು ಸಲಹೆ ನೀಡಿದರು.

‘25 ಕೋಳಿಗಳಿಂದ ದಿನಕ್ಕೆ 25 ಮೊಟ್ಟೆಗಳು ದೊರೆಯುತ್ತವೆ. ಹೆಚ್ಚಿನ ಬಂಡವಾಳ ಹೂಡದೆ ತಿಂಗಳಿಗೆ ₹6000 ಗಳಿಸಬಹುದು. ಮಹಿಳೆಯರು ತಮ್ಮ ನಿತ್ಯದ ಚಟುವಟಿಕೆ ಮಧ್ಯೆ ಇದನ್ನು ಗಳಿಸಬಹುದು’ ಎನ್ನುತ್ರಾರೆ ಪ್ರೊ.ಪ್ರತಾಪ್ ಕುಮಾರ್.

‘ಬಾಯ್ಲರ್ ಕೋಳಿ ಸಾಕಣೆ ಕೇಂದ್ರವನ್ನು ಐದಾರು ವರ್ಷಗಳ ಹಿಂದೆ ಮಾಡಿ ಕೈ ಸುಟ್ಟುಕೊಂಡಿದ್ದೆ. ಗೆಳೆಯನೊಬ್ಬ ಕಾವೇರಿ ತಳಿಯ ಬಗ್ಗೆ ತಿಳಿಸಿದ. ಮೊದಲು ಒಂದು ಸಾವಿರ ಕೋಳಿಗಳನ್ನು ಸಾಕಿದೆ. ಎರಡೂವರೆ ತಿಂಗಳಿಗೆ ₹60 ಸಾವಿರ ಲಾಭ ಬಂತು. ಮತ್ತೆ ಎರಡು ಸಾವಿರ ಕೋಳಿಗಳನ್ನು ಸಾಕಿದೆ. ಮಾರುಕಟ್ಟೆ ಮತ್ತು ಡಾಬಾಗಳಲ್ಲಿ ನಾಟಿ ಕೋಳಿಯ ಮೊಟ್ಟೆ ಮತ್ತು ಮಾಂಸಕ್ಕೆ ಬಹು ಬೇಡಿಕೆ ಇದೆ’ ಎಂದು ಚನ್ನಪಟ್ಟಣ ತಾಲ್ಲೂಕಿನ ದಿನೇಶ್ ಕೋಲೂರು ಹೇಳಿದರು.

ಒಂದು ದಿನದ ಮರಿ ಕೋಳಿಗೆ ₹28ರಿಂದ ₹30 ವೆಚ್ಚ ತಗಲುತ್ತದೆ. ಮರಿಗಳು ಬೇಕೆಂದರೆ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಪಡೆಯ
ಬಹುದು. ಹೆಚ್ಚಿನ ಮಾಹಿತಿಗೆ: 080-28466262/236

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.