ADVERTISEMENT

ಬಿಎಸ್‌ಆರ್‌ಪಿ | ಕಾರ್ಯ ಸಾಧ್ಯತಾ ಅಧ್ಯಯನ: ಮರು ಪರಿಶೀಲನೆಗೆ ಪತ್ರ

ಬಿಎಸ್‌ಆರ್‌ಪಿ: ಪ್ರಮುಖ ನಗರಗಳಿಗೆ ವಿಸ್ತರಿಸುವ ಪ್ರಸ್ತಾವವನ್ನು ನಿರಾಕರಿಸಿದ್ದ ನೈರುತ್ಯ ರೈಲ್ವೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 22:30 IST
Last Updated 3 ಏಪ್ರಿಲ್ 2024, 22:30 IST
ಉಪನಗರ ರೈಲು
ಉಪನಗರ ರೈಲು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಮೈಸೂರು ಸೇರಿದಂತೆ ಸಮೀಪದ ನಗರಗಳಿಗೆ ವಿಸ್ತರಿಸಲು ಕಾರ್ಯ ಸಾಧ್ಯತಾ ಅಧ್ಯಯನಕ್ಕಾಗಿ ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತಕ್ಕೆ(ಕೆ–ರೈಡ್‌) ನೈರುತ್ಯ ರೈಲ್ವೆ ಅನುಮತಿ ನಿರಾಕರಿಸಿದ್ದು, ಈ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಕೋರಿ ಕೆ–ರೈಡ್ ಮತ್ತೆ ಪತ್ರ ಬರೆದಿದೆ.

ಒಟ್ಟು 452 ಕಿ.ಮೀ. ಉದ್ದಕ್ಕೆ ಬಿಎಸ್‌ಆರ್‌ಪಿಯನ್ನು ವಿಸ್ತರಿಸುವುದಕ್ಕಾಗಿ ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆಯಲು ಕೆ–ರೈಡ್‌ 2023ರ ಜುಲೈನಲ್ಲಿ ಪತ್ರ ಬರೆದಿತ್ತು. ‘ಕಾರ್ಯ ಸಾಧ್ಯತಾ ಅಧ್ಯಯನ ಅಗತ್ಯವಿಲ್ಲ’ ಎಂದು ನೈರುತ್ಯ ರೈಲ್ವೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಪತ್ರಕ್ಕೆ ನವೆಂಬರ್‌ನಲ್ಲಿ ಉತ್ತರ ಬರೆದಿದ್ದರು. ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೆ–ರೈಡ್‌ ಕೋರಿದೆ.

ಯೋಜನೆ ಏನು?: ಬಿಎಸ್‌ಆರ್‌ಪಿಯಡಿ ಕೆಎಸ್‌ಆರ್‌ ಬೆಂಗಳೂರು–ದೇವನಹಳ್ಳಿ, ಬೈಯಪ್ಪನಹಳ್ಳಿ–ಚಿಕ್ಕಬಾಣಾವರ, ಕೆಂಗೇರಿ–ವೈಟ್‌ಫೀಲ್ಡ್‌, ಹೀಲಲಿಗೆ–ರಾಜಾನುಕುಂಟೆ, ಒಟ್ಟು 148.17 ಕಿ.ಮೀ. ಹೊಂದಿರುವ ನಾಲ್ಕು ಕಾರಿಡಾರ್‌ಗಳು ನಿರ್ಮಾಣಗೊಳ್ಳುತ್ತಿವೆ. ದೇವನಹಳ್ಳಿಯಿಂದ ಕೋಲಾರ, ಚಿಕ್ಕಬಾಣಾವರದಿಂದ ತುಮಕೂರು ಮತ್ತು ಮಾಗಡಿ, ಕೆಂಗೇರಿಯಿಂದ ಮೈಸೂರು, ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ, ಹೀಲಲಿಗೆಯಿಂದ ಹೊಸೂರು ಹಾಗೂ ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರಕ್ಕೆ ವಿಸ್ತರಿಸುವ ಯೋಜನೆ ಇದಾಗಿದೆ. ಯೋಜನೆ ಜಾರಿಗಾಗಿ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಕೆ- ರೈಡ್ ಸಿದ್ಧವಿದೆ ಎಂದು ಮೊದಲು ಬರೆದ ಪತ್ರದಲ್ಲಿ ತಿಳಿಸಲಾಗಿತ್ತು.

ADVERTISEMENT

ಬೆಂಗಳೂರು–ಜೋಲಾರ್‌ಪೇಟೆ, ಬೆಂಗಳೂರು– ಧರ್ಮಾವರಂ, ಬೆಂಗಳೂರು– ತುಮಕೂರು ಮಾರ್ಗಗಳಲ್ಲಿ ಗಂಟೆಗೆ 130/160 ಕಿ.ಮೀ. ವೇಗದಲ್ಲಿ ಚಲಿಸುವ ರೈಲುಗಳು ಸಂಚರಿಸಲಿವೆ. ಸ್ವಯಂಚಾಲಿತ ಬ್ಲಾಕ್‌ ಸಿಗ್ನಲಿಂಗ್‌ ಒದಗಿಸಲಾಗುತ್ತಿದೆ. ಪ್ರಮುಖ ಕಾರಿಡಾರ್‌ಗಳಲ್ಲಿ ದ್ವಿಪಥ, ಚತುಷ್ಪಥ ಕೆಲಸಗಳಾಗುತ್ತಿವೆ. ನಿಡವಂದ–ದೊಡ್ಡಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತರೈಲು ಸಂಪರ್ಕ ಜಾಲದ ಸಮೀಕ್ಷೆಯನ್ನು ಇತ್ತೀಚೆಗೆ ರೈಲ್ವೆ ಮಂಡಳಿಯು ಮಂಜೂರು ಮಾಡಿದೆ. ಹೀಗೆ ಸ್ಯಾಟಲೈಟ್‌ ನಗರಗಳಿಗೆ ರೈಲು ಸೇವೆ ವಿಸ್ತರಿಸಲು ಹಲವು ಯೋಜನೆಗಳನ್ನು ಹಾಕಿಕೊಂಡಿರುವುದರಿಂದ ಬಿಎಸ್‌ಆರ್‌ಪಿ ವಿಸ್ತರಣೆಯ ಅಗತ್ಯ ಕಾಣುತ್ತಿಲ್ಲ ಎಂದು ನೈರುತ್ಯ ರೈಲ್ವೆ ಪ್ರತಿ ಪತ್ರ ಬರೆದು ತಿಳಿಸಿತ್ತು.

ಬೆಂಗಳೂರು ಸುತ್ತಲಿನ ನಗರಗಳಿಗೆ ಉಪನಗರ ಯೋಜನೆ ವಿಸ್ತರಿಸಿದಾಗ ಪ್ರತಿ ಊರಿನಲ್ಲಿ ನಿಲ್ದಾಣಗಳಿರುತ್ತವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಈಗಿರುವ ರೈಲು ಯೋಜನೆಗಳಿಗಿಂತ ಭಿನ್ನವಾಗಿರುತ್ತದೆ. ಜನದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಕೆ–ರೈಡ್‌ ಈಗ ಮರು ಪರಿಶೀಲಿಸಲು ಬರೆದ ಪತ್ರದಲ್ಲಿ ವಿವರಣೆ ನೀಡಿದೆ.

ನಿಡವಂದ–ದೊಡ್ಡಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತರೈಲು ಸಂಪರ್ಕ ಜಾಲ ನಿರ್ಮಿಸುವ ಯೋಜನೆಯನ್ನು ರೈಲ್ವೆ ಬೋರ್ಡ್‌ ಹೊಂದಿದೆ. ಈ ಜಾಲವನ್ನು ಬಿಎಸ್‌ಆರ್‌ಪಿ ಪ್ರಸ್ತಾವಿತ ಯೋಜನೆ ಹಾದು ಹೋಗುವುದರಿಂದ ಇನ್ನಷ್ಟು ಅನುಕೂಲವಾಗುವುದನ್ನು ಪತ್ರದಲ್ಲಿ ವಿವರಿಸಲಾಗಿದೆ ಎಂದು ಕೆ–ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.