ಬೆಂಗಳೂರು: ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು (ಬಿಐಸಿ) ಇದೇ 27ರಂದು ಬೆಳಿಗ್ಗೆ 11 ಗಂಟೆಗೆ ‘ಅರಿವು ಮತ್ತು ಗುರುವು’ ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ. ಈ ಸಾಕ್ಷ್ಯ ಚಿತ್ರವು ನಿಘಂಟು ತಜ್ಞ ಫರ್ಡಿನೆಂಡ್ ಕಿಟೆಲ್ ಅವರ ಜೀವನ ಮತ್ತು ಸಾಧನೆಯನ್ನು ಪರಿಚಯಿಸುತ್ತದೆ.
80 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ಪ್ರಶಾಂತ್ ಪಂಡಿತ್ ನಿರ್ದೇಶಿಸಿದ್ದಾರೆ. ಚಿದಾನಂದ್ ಜಿ.ಎಲ್. ಮತ್ತು ಫ್ಲೋರಿನಾ ಸ್ಟೈನರ್ ಅವರ ಛಾಯಾಗ್ರಹಣವಿದೆ. ಆನಂದ್ ವಿ. ಮತ್ತು ಮಹಾವೀರ್ ಎಸ್. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದೆ. 2023ರಲ್ಲಿ ಬಿಡುಗಡೆಯಾದ ಈ ಸಾಕ್ಷ್ಯಚಿತ್ರದಲ್ಲಿ, ಕನ್ನಡ, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಯಲ್ಲಿ ಹಿನ್ನೆಲೆ ಧ್ವನಿ ನೀಡಲಾಗಿದೆ. ಇಂಗ್ಲಿಷ್ ಭಾಷೆಯಲ್ಲಿ ಉಪ ಶೀರ್ಷಿಕೆ ಹೊಂದಿದೆ.
ಕಿಟೆಲ್ ಅವರು ಭಾರತ ಮತ್ತು ಜರ್ಮನಿಯಲ್ಲಿ ವಾಸವಿದ್ದ ಸ್ಥಳಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲಾಗಿದೆ. ಕನ್ನಡ ನಾಡಿನ ವಿವಿಧೆಡೆ ಸುಮಾರು 30 ವರ್ಷಗಳು ನೆಲೆಸಿದ್ದ ಅವರು, ಜರ್ಮಿನಿಗೆ ತೆರಳಿದ ಬಳಿಕವೂ ಕನ್ನಡದ ಕೆಲಸವನ್ನು ಮುಂದುವರಿಸಿದ್ದರು. ಅವರ ಜೀವನಯಾನವನ್ನು ಅವರೇ ತಮ್ಮ ಮಾತುಗಳಲ್ಲಿ ಹೇಳಿದಂತೆ ಕಟ್ಟಿಕೊಡಲಾಗಿದೆ.
ಕಿಟೆಲ್ ಅವರು ‘ಕನ್ನಡ– ಇಂಗ್ಲಿಷ್ ನಿಘಂಟು’ ರಚಿಸುವ ಜತೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭಾರತಕ್ಕೆ ಧರ್ಮ ಪ್ರಚಾರಕ್ಕಾಗಿ ಜರ್ಮನಿಯಿಂದ ಬಂದಿದ್ದ ಅವರು, ಇಲ್ಲಿನ ಸಂಸ್ಕೃತಿಯನ್ನು ಅರಿಯುವ ಜತೆಗೆ ಕನ್ನಡವನ್ನೂ ಕಲಿತಿದ್ದರು. ಭಾರತ ಮತ್ತು ಜರ್ಮನಿಯ ನಡುವೆ ಭಾಷಾ ಹಾಗೂ ಸಾಂಸ್ಕೃತಿಕ ವಿನಿಮಯಕ್ಕೆ ಕೊಡುಗೆ ನೀಡಿದ ಅವರು, ಲೇಖಕ, ಅನುವಾದಕ, ಭಾಷಾ ವಿಜ್ಞಾನಿ ಹಾಗೂ ಶಬ್ದಕೋಶ ತಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಈ ಸಾಕ್ಷ್ಯಚಿತ್ರವು ಶಬ್ದಕೋಶ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿ ಕಿಟೆಲ್ ಅವರ ಪ್ರಯಾಣವನ್ನು ದಾಖಲಿಸಿದೆ.
‘ಕಿಟೆಲ್ ಅವರು ಕನ್ನಡ ನಾಡಿಗೆ ಅನುಪಮ ಕೊಡುಗೆ ನೀಡಿದ್ದಾರೆ. 2020ರಲ್ಲಿ ಈ ಸಾಕ್ಷ್ಯಚಿತ್ರ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಬಳಿಕ ಕೋವಿಡ್ ಕಾಣಿಸಿಕೊಂಡಿದ್ದರಿಂದ, ಪೂರ್ಣಗೊಳಿಸಲು ಮೂರು ವರ್ಷಗಳು ಬೇಕಾಯಿತು. ವಿದ್ವಾಂಸರು, ಸಂಶೋಧನಾ ಸಂಸ್ಥೆಗಳು ಸೇರಿ ವಿವಿಧೆಡೆ ಲಭ್ಯವಿರುವ ಮಾಹಿತಿಯನ್ನು ಕಲೆಹಾಕಿ, ಚಿತ್ರೀಕರಿಸುವ ಕೆಲಸ ಸುಲಭವಾಗಿರಲಿಲ್ಲ. ಜರ್ಮನಿಯಲ್ಲಿರುವ ಅವರ ನಿವಾಸಕ್ಕೂ ಭೇಟಿ ನೀಡಿ, ಚಿತ್ರೀಕರಿಸಲಾಗಿದೆ. ಈ ಸಾಕ್ಷ್ಯಚಿತ್ರವು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿ ವಿವಿಧೆಡೆ ಪ್ರದರ್ಶನ ಕಂಡಿದೆ’ ಎಂದು ಚಿತ್ರ ನಿರ್ದೇಶಕ ಪ್ರಶಾಂತ್ ಪಂಡಿತ್ ತಿಳಿಸಿದರು.
ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಉಚಿತ ಪ್ರವೇಶವಿದೆ. ಚಿತ್ರ ನಿರ್ದೇಶಕ ಪ್ರಶಾಂತ್ ಪಂಡಿತ್ ಅವರು ಉಪಸ್ಥಿತರಿರಲಿದ್ದು, ಪ್ರದರ್ಶನದ ಬಳಿಕ ಸಂವಾದಕ್ಕೂ ಅವಕಾಶ ಇರಲಿದೆ.
ಪ್ರಶಾಂತ್ ಪಂಡಿತ್ ನಿರ್ದೇಶನದಲ್ಲಿ ಮೂಡಿಬಂದ 80 ನಿಮಿಷಗಳ ಸಾಕ್ಷ್ಯಚಿತ್ರ ಕನ್ನಡ ಇಂಗ್ಲಿಷ್ ಮತ್ತು ಜರ್ಮನ್ ಭಾಷೆಯಲ್ಲಿ ಹಿನ್ನೆಲೆ ಧ್ವನಿ ಕಿಟೆಲ್ ಅವರು ಭಾರತ ಮತ್ತು ಜರ್ಮನಿಯಲ್ಲಿ ವಾಸವಿದ್ದ ಸ್ಥಳಗಳಲ್ಲಿ ಚಿತ್ರೀಕರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.