ADVERTISEMENT

GBA ವಾರ್ಡ್‌ಗಳಲ್ಲೇ ಹಸಿ ಕಸದಿಂದ ಗೊಬ್ಬರ: ಎ.ಎನ್‌. ನಟರಾಜ್‌

ಅಪಾರ್ಟ್‌ಮೆಂಟ್‌ಗಳಲ್ಲಿ ಗೊಬ್ಬರ ತಯಾರಿಸಿದರೆ ಖರೀದಿ: ಎ.ಎನ್‌. ನಟರಾಜ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 23:32 IST
Last Updated 6 ಜನವರಿ 2026, 23:32 IST
ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮದ (ಕೆಸಿಡಿಸಿ) ಅಧ್ಯಕ್ಷ ಎ.ಎನ್‌. ನಟರಾಜ್‌
ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮದ (ಕೆಸಿಡಿಸಿ) ಅಧ್ಯಕ್ಷ ಎ.ಎನ್‌. ನಟರಾಜ್‌   

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್‌ಗಳಲ್ಲಿ ಹಸಿ ಕಸದಿಂದ ಗೊಬ್ಬರ ತಯಾರಿಸುವ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮದ (ಕೆಸಿಡಿಸಿ) ಅಧ್ಯಕ್ಷ ಎ.ಎನ್‌. ನಟರಾಜ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

‘ಬೆಂಗಳೂರು ನಗರದ ನಾಗರಿಕರು ಹಸಿ ಕಸ, ಒಣಕಸ ವಿಂಗಡಣೆ ಮಾಡುವುದರಿಂದ ನಗರ ಸ್ವಚ್ಚತೆ ಜೊತೆಗೆ ಗೊಬ್ಬರ ತಯಾರಿಕೆಗೆ ಸಹಕಾರಿಯಾಗಲಿದೆ. ಘಟಕಗಳ ಜೊತೆಗೆ ಎಲ್ಲ ವಾರ್ಡ್‌ಗಳಲ್ಲೂ ಹಸಿ ತ್ಯಾಜ್ಯದಿಂದ ಹಸಿ ಕಸ ತಯಾರಿಕೆಗೆ ಘಟಕ ಸ್ಥಾಪಿಸಲು ಉದ್ಧೇಶಿಸಲಾಗಿದೆ. ಇದಕ್ಕೆ ಹೆಚ್ಚಿನ ಸ್ಥಳದ ಅಗತ್ಯವಿಲ್ಲ. ಲಭ್ಯವಿರುವ ಜಾಗದಲ್ಲೇ ಘಟಕ ಸ್ಥಾಪಿಸಲಾಗುತ್ತದೆ’ ಎಂದರು.

ಪ್ರಮುಖ ವಾಣಿಜ್ಯ ಸಂಕೀರ್ಣಗಳು ಹಾಗೂ ವಸತಿ ಸಮುಚ್ಚಯಗಳಲ್ಲಿ (ಅಪಾರ್ಟ್‌ಮೆಂಟ್‌) ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸುವ ಮೂಲಕ ತ್ಯಾಜ್ಯ ಸಾಗಾಣಿಕೆ ಹೊರೆಯನ್ನು ತಗ್ಗಿಸಲು ಯೋಜನೆ ರೂಪಿಸಲಾಗುತ್ತಿದೆ. ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದಂತೆ ಹಸಿ ತ್ಯಾಜ್ಯವನ್ನು ಗೊಬ್ಬರವಾಗಿಸುವ ಘಟಕ ಸ್ಥಾಪಿಸುವುದನ್ನೂ ಕಡ್ಡಾಯಗೊಳಿಸಲು ಚಿಂತಿಸಲಾಗಿದೆ. ಅಲ್ಲಿ ಉತ್ಪಾದನೆಯಾಗುವ  ಕಸವನ್ನು ಕೆಸಿಡಿಸಿ ಖರೀದಿ ಮಾಡುತ್ತದೆ ಎಂದು ನಟರಾಜ್‌ ಹೇಳಿದರು.

ADVERTISEMENT

ಉದ್ಯಾನಗಳಲ್ಲಿ ಹಸಿರು ಗೊಬ್ಬರ: ನಗರದ ದೊಡ್ಡ ಉದ್ಯಾನಗಳಲ್ಲಿ ‘ಕಾಂಪೋಸ್ಟ್ ಘಟಕ’ಗಳನ್ನು ಸ್ಥಾಪಿಸಿ, ಅಲ್ಲಿ ಎಲೆಗಳು ಮತ್ತು ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಉದ್ಯಾನಕ್ಕೆ ಅಗತ್ಯವಾದಷ್ಟು ಬಳಸಿಕೊಂಡು, ಉಳಿದಿದ್ದನ್ನು ಮಾರಾಟ ಮಾಡಲಾಗುತ್ತದೆ ಎಂದರು.

‘ಶೂನ್ಯ ತ್ಯಾಜ್ಯ ನಗರ’‘

ಬೆಂಗಳೂರನ್ನು ಶೂನ್ಯ ತ್ಯಾಜ್ಯ ನಗರವನ್ನಾಗಿಸಲು ಹೊಸ ಯೋಜನೆ ರೂಪಿಸಿ ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲಿಂದ ಸಮ್ಮತಿ ದೊರೆತ ಕೂಡಲೇ ನಗರದಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಸುಮಾರು 1500 ಟನ್‌ ಹಸಿ ಕಸವನ್ನು ಕೆಸಿಡಿಸಿಯಿಂದಲೇ ಗೊಬ್ಬರವನ್ನಾಗಿಸಲಾಗುವುದು’ ಎಂದು ಕೆಸಿಡಿಸಿ ಅಧ್ಯಕ್ಷ ನಟರಾಜ್‌ ತಿಳಿಸಿದರು.

5 ಸಾವಿರ ಟನ್‌ ಗೊಬ್ಬರ ಮಾರಾಟ

ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮದ ಆರು ಘಟಕಗಳಲ್ಲಿ ದಾಸ್ತಾನಿದ್ದ ಐದು ಸಾವಿರ ಟನ್‌ ಗೊಬ್ಬರವನ್ನು ವಿವಿಧ ಜಿಲ್ಲೆಯ ರೈತರಿಗೆ ಸಬ್ಸಿಡಿ ದರದಲ್ಲಿ ಎರಡು ತಿಂಗಳಲ್ಲಿ ಮಾರಾಟ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷ ಎ.ಎನ್‌. ನಟರಾಜ್‌ ತಿಳಿಸಿದರು. ‘ಹಸಿ ಕಸದಿಂದ ತಯಾರಿಸಿದ ಗೊಬ್ಬರಕ್ಕೆ ಟನ್‌ವೊಂದಕ್ಕೆ ₹3600 ನಿಗದಿ ಮಾಡಲಾಗಿತ್ತು. ಸರ್ಕಾರದಿಂದ ಅನುಮತಿ ಪಡೆದು ರೈತರಿಗೆ ಪ್ರತಿ ಟನ್‌ಗೆ ₹2000ಕ್ಕೆ ಮಾರಾಟ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.