ADVERTISEMENT

ಪಿಎಚ್‌ಸಿ, ರೆಫರಲ್‌ ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯ ಆರಂಭ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 8:48 IST
Last Updated 8 ಜುಲೈ 2020, 8:48 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‍ಗಳಲ್ಲಿ ಬರುವ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಹಾಗೂ ರೆಫರಲ್ ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯಗಳನ್ನು (ಫಿವರ್‌ ಕ್ಲಿನಿಕ್‌) ಪ್ರಾರಂಭಿಸಲಾಗಿದೆ.

ಕೋವಿಡ್ ಪ್ರಕರಣಗಳನ್ನು ನಗರದಲ್ಲಿ ಕಾಣಿಸಿಕೊಂಡ ಬಳಿಕ ಜ್ವರದ ಲಕ್ಷಣ ಇರುವವರಿಗೆ ವೈದ್ಯಕೀಯ ಸಮಾಲೋಚನೆಗಾಗಿ ಬಿಬಿಎಂಪಿ ವತಿಯಿಂದ ಜ್ವರ ಚಿಕಿತ್ಸಾಲಯಗಳನ್ನು ಏಪ್ರಿಲ್‌ನಲ್ಲಿ ಆರಂಭಿಸಲಾಗಿತ್ತು. ಕೊರೊನಾ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ಗಂಟಲು ಕೆರೆತ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೊದಲ ಸಂಪರ್ಕ ಕೇಂದ್ರಗಳಾಗಿ ಇವು ಕಾರ್ಯನಿರ್ವಹಿಸುತ್ತಿವೆ. ಕೋವಿಡ್ ಪ್ರಕರಣಗಳನ್ನು ಗುರುತಿಸಿ ಪ್ರತ್ಯೇಕಿಸಲು ನೆರವಾಗುತ್ತಿವೆ.

ಆರಂಭದಲ್ಲಿ ಜ್ವರ ಕ್ಲಿನಿಕ್‌ಗಳಲ್ಲಿ ನಿತ್ಯ ತಪಾಸಣಾ ಸಾಮರ್ಥ್ಯ ನೂರರ ಆಸುಪಾಸಿನಲ್ಲಿತ್ತು. ಈಗ ನಿತ್ಯ ಸಾವಿರಾರು ಮಂದಿ ಈ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಏಪ್ರಿಲ್ ನಿಂದ ಇದುವರೆಗೆ 20 ಸಾವಿರಕ್ಕೂ ಹೆಚ್ಚು ವ್ಯಕ್ತಿಗಳು ಈ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ADVERTISEMENT

‘ಶೀತ ಸಂಬಂಧಿ ಕಾಯಿಲೆಗಳು ಮತ್ತು ತೀವ್ರತೆರನಾದ ಉಸಿರಾಟದ ಸೋಂಕಿನಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅಂತಹವರ ಆರೋಗ್ಯ ತಪಾಸಣೆಗೆ, ಗಂಟಲು ದ್ರವದ ಮಾದರಿಯ ಸಂಗ್ರಹಿಸಲು ಮತ್ತು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲು ಜ್ವರ ಚಿಕಿತ್ಸಾಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ’ ಎಂದು ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕೋವಿಡ್‌ ಪರೀಕ್ಷೆ

‘ಪಾಲಿಕೆ ಅಧೀನದಲ್ಲಿರುವ 133 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆರು ರೆಫರಲ್ ಆಸ್ಪತ್ರೆಗಳಲ್ಲಿ ಕೋವಿಡ್‌ ಲಕ್ಷಣಗಳಿರುವವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಇದರ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ’ ಎಂದು ಅನಿಲ್‌ ಕುಮಾರ್‌ ತಿಳಿಸಿದರು.

‘ಜ್ವರ ಚಿಕಿತ್ಸಾಲಯಗಳು ನಿತ್ಯ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೂ ಕಾರ್ಯನಿರ್ವಹಿಸಲಿವೆ. ಗಂಟಲು ಮಾದರಿ ದ್ರ ಸಂಗ್ರಹಣೆಯನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೂ ನಡೆಸಲಾಗುತ್ತದೆ. ಅಂತರ ಕಾಪಾಡಲು ನೆರವಾಗುವ ಸಲುವಾಗಿ ಟೋಕನ್ ವಿತರಿಸಲಾಗುತ್ತದೆ’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.