ADVERTISEMENT

‘ನಿಶ್ಚಿಂತೆಯಿಂದ ಇದ್ದಲ್ಲಿ ವಿಶೇಷ ಚಿಕಿತ್ಸೆ ಅನಗತ್ಯ’

ಕೋವಿಡ್ ಜಯಿಸಿದ 23 ವರ್ಷದ ಯುವಕ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 22:01 IST
Last Updated 8 ಆಗಸ್ಟ್ 2020, 22:01 IST
ದುರ್ಗಪ್ಪ
ದುರ್ಗಪ್ಪ   

ಬೆಂಗಳೂರು: ‘ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಕೆಲವೇ ದಿನಗಳು ಮಾತ್ರ ಕಳೆದಿದ್ದವು. ಇಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದಂತೆ ಕೆಲಸ ತೊರೆದು, ಊರಿಗೆ ಮರಳುವಂತೆ ಬಂಧುಗಳು ಒತ್ತಾಯಿಸಲಾರಂಭಿಸಿದರು. ಅದಾಗಲೇ ನನಗೂ ಕೊರೊನಾ ಸೋಂಕು ತಗುಲಿತ್ತು. ಇದರಿಂದ ಬೆಂಗಳೂರಿನ ಸಹವಾಸವೇ ಸಾಕು ಎನಿಸಿತ್ತು. ಕೋವಿಡ್ ಆಸ್ಪತ್ರೆಗೆ ದಾಖಲಾದ ಬಳಿಕ ಇದು ಕೂಡ ಸಾಮಾನ್ಯ ಜ್ವರ ಎನ್ನುವುದು ಮನದಟ್ಟಾಯಿತು‌.’

ಕೋವಿಡ್ ಜಯಿಸಿ ಬಂದ 23 ವರ್ಷದ ಯುವಕ ದುರ್ಗಪ್ಪ ಅವರ ಅನುಭವದ ಮಾತುಗಳಿವು. ಕೊಪ್ಪಳದ ಕುಷ್ಟಗಿಯ ಅವರು ಸದ್ಯ ಹಲಸೂರಿನ ಬಿಬಿಎಂಪಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದ ಎರಡು ದಿನಗಳಲ್ಲೇ ಚೇತರಿಸಿಕೊಂಡಿದ್ದ ಅವರನ್ನು ನಿಯಮದಂತೆ 10 ದಿನಗಳು ಆಸ್ಪತ್ರೆಯಲ್ಲಿ ಇರಿಸಿಕೊಂಡು, ಮನೆಗೆ ಕಳುಹಿಸಲಾಗಿತ್ತು. ಈಗ ಕರ್ತವ್ಯಕ್ಕೆ ಮರಳಿರುವ ಅವರು, ಕೋವಿಡ್ ಜಯಿಸುವ ಬಗ್ಗೆ ಜನರಲ್ಲಿ ಸ್ಥೈರ್ಯ ತುಂಬುತ್ತಿದ್ದಾರೆ.

‘ಜೂನ್ ತಿಂಗಳಲ್ಲಿ ರಜೆಯ ಮೇಲೆ ಬೈಕ್‌ನಲ್ಲಿ ಊರಿಗೆ ಪ್ರಯಾಣಿಸಿದೆ. ಆಗ ಸುಸ್ತಾದ ಅನುಭವ ಉಂಟಾಯಿತು. ಹೀಗಾಗಿ ಆಸ್ಪತ್ರೆಗೆ ತೆರಳಿ, ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡೆ. ಬೆಂಗಳೂರಿಗೆ ವಾಪಸ್ ಆದ ಬಳಿಕ ಕೋವಿಡ್ ಪರೀಕ್ಷಾ ವರದಿಯಲ್ಲಿ ಸೋಂಕು ತಗುಲಿದೆ ಎನ್ನುವುದು ತಿಳಿಯಿತು. ಸಿ.ವಿ. ರಾಮನ್ ಆಸ್ಪತ್ರೆಗೆ ದಾಖಲಾದೆ. ಆಸ್ಪತ್ರೆಗೆ ತೆರಳುವಾಗ ಕುಟುಂಬದ ಸದಸ್ಯರಿಗೆ ಏನು ಹೇಳಬೇಕೆಂದೇ ತೋಚಿರಲಿಲ್ಲ. ಈ ರೋಗದಿಂದ ಗುಣಮುಖನಾಗುತ್ತೇನೆಯೇ ಎಂಬುದೂ ಸೇರಿ ಅನೇಕ ಪ್ರಶ್ನೆಗಳು ಕಾಡಿದವು. ದುಃಖ ತಡೆಯಲು ಸಾಧ್ಯವಾಗಲಿಲ್ಲ. ದಾಖಲಾದ ಬಳಿಕ ಅಲ್ಲಿನ ರೋಗಿಗಳು ಸಮಾಧಾನ ಮಾಡಿ, ಧೈರ್ಯ ತುಂಬಿದರು’ ಎಂದು ದುರ್ಗಪ್ಪ‍ ವಿವರಿಸಿದರು.

ADVERTISEMENT

‘ವಾರ್ಡ್‌ನಲ್ಲಿದ್ದ ಅತ್ಯಂತ ಕಿರಿಯ ವ್ಯಕ್ತಿ ನಾನು. ಎಂಜಿನಿಯರ್, ಶಿಕ್ಷಕ ಸೇರಿದಂತೆ ವಿವಿಧ ವೃತ್ತಿನಿರತರು ಕೂಡ ಸೋಂಕಿತರಾಗಿ ಚಿಕತ್ಸೆ ಪಡೆಯುತ್ತಿದ್ದರು. ಅವರು ನನ್ನಲ್ಲಿನ ಗೊಂದಲಗಳನ್ನು ದೂರ ಮಾಡಿದರು. ಬಳಿಕ ಆಸ್ಪತ್ರೆಯಲ್ಲಿ 10 ದಿನಗಳು ಕಳೆದದ್ದೇ ತಿಳಿಯಲಿಲ್ಲ’ ಎಂದರು.

‘ಕೊರೊನಾ ಸೋಂಕಿಗೆ ಭಯಪಡುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ನೀಡುವ ಮಾತ್ರೆಗಳನ್ನು ಸೇವಿಸಿ, ನಿಶ್ಚಿಂತೆಯಿಂದ ಇದ್ದಲ್ಲಿ ಯಾವುದೇ ವಿಶೇಷ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ. ಪೌಷ್ಟಿಕ ಆಹಾರವನ್ನು ಸೇವಿಸಿದರೆ ಸಾಕು. ಇದು ಕೂಡ ಸಾಮಾನ್ಯ ಜ್ವರ ಹಾಗೂ ಕೆಮ್ಮಿನಂತೆ ಬಂದು ಗುಣಮುಖವಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.