
ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಪ್ರೀತಿಸುವಂತೆ ವಸ್ತ್ರ ವಿನ್ಯಾಸಕಿಯನ್ನು ಪೀಡಿಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದಾಶಿವನಗರ ನಿವಾಸಿ 42 ವರ್ಷದ ಸಂತ್ರಸ್ತೆ ದೂರಿನ ಮೇರೆಗೆ ಸಂತೋಷ್ ರೆಡ್ಡಿ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ, ಅಪರಾಧ ಸಂಚು, ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ದೂರುದಾರ ವಸ್ತ್ರ ವಿನ್ಯಾಸಕಿಯು ವಿವಾಹಿತರಾಗಿದ್ದು, ಹಲವು ವರ್ಷಗಳಿಂದ ಸದಾಶಿವನಗರದ ಸ್ಯಾಂಕಿ ಮುಖ್ಯರಸ್ತೆಯ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದಾರೆ. ಅವರ ಪತಿ ಉತ್ತರ ಭಾರತದಲ್ಲಿದ್ದಾರೆ. 2023ರಲ್ಲಿ ಸಂತೋಷ್ ರೆಡ್ಡಿಯ ಮಗಳು ಭಾವನ್ಯಾ ರೆಡ್ಡಿ ಅವರು ವಸ್ತ್ರ ವಿನ್ಯಾಸಕಿಯನ್ನು ಸಂಪರ್ಕಿಸಿ, ತಮ್ಮ ಸಂಬಂಧಿಕರ ಮದುವೆಗೆ ವಸ್ತ್ರ ವಿನ್ಯಾಸ ಮಾಡಿಕೊಡುವಂತೆ ಕೇಳಿದ್ದರು. ಅದರಂತೆ ವಸ್ತ್ರ ವಿನ್ಯಾಸ ಮಾಡಿಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಸಂತೋಷ್ ರೆಡ್ಡಿ ತಮ್ಮ ಮಗಳ ಮೂಲಕ ವಸ್ತ್ರ ವಿನ್ಯಾಸಕಿಯನ್ನು ಪರಿಚಯಿಸಿಕೊಂಡು, ಕಂಪನಿಯಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದರು. ಆದರೆ, ವಸ್ತ್ರ ವಿನ್ಯಾಸಕಿ ಮತ್ತು ಅವರ ಕುಟುಂಬ ಸದಸ್ಯರು ಅದಕ್ಕೆ ಒಪ್ಪಿರಲಿಲ್ಲ ಎಂದು ಹೇಳಿದರು.
‘ಕೆಲ ತಿಂಗಳುಗಳ ಹಿಂದೆ ನನಗೆ ಕರೆ ಮಾಡಿದ್ದ ಸಂತೋಷ್ ರೆಡ್ಡಿ, ತಮ್ಮ ಮಗಳಿಗೆ ಮದುವೆ ಮಾಡಲು ನಿರ್ಧರಿಸಿರುವುದಾಗಿ ಹೇಳಿ ಒಳ್ಳೆಯ ವರ ನೋಡುವಂತೆ ಕೋರಿದ್ದರು. ಮತ್ತೆ ಕೆಲ ದಿನಗಳ ಬಳಿಕ ಕರೆ ಮಾಡಿ, ಮಗಳು ಹಣದೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಅಲವತ್ತುಕೊಂಡಿದ್ದರು. ಆಗ ಅವರನ್ನು ಸಮಾಧಾನಪಡಿಸಿದ್ದೆ’ ಎಂದು ವಸ್ತ್ರ ವಿನ್ಯಾಸಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಜುಲೈ 14ರಂದು ಸಂತೋಷ್ ರೆಡ್ಡಿ ನಮ್ಮ ಮನೆಗೆ ಬಂದು, ‘ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ಪ್ರೀತಿ ಒಪ್ಪಿಕೊಳ್ಳಿ’ ಎಂದು ಕೇಳಿದ್ದರು. ಅವರ ಪ್ರೀತಿಯನ್ನು ನಿರಾಕರಿಸಿದಾಗ, ನನ್ನನ್ನು ಬಲವಂತದಿಂದ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದರು. ಅಲ್ಲದೆ, ಮೈ ಕೈ ಮುಟ್ಟಿ ಬಲ ಕೆನ್ನೆಗೆ ಮುಷ್ಟಿಯಿಂದ ಹೊಡೆದಿದ್ದರು. ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೆ ಕೊಲೆ ಮಾಡುತ್ತೇನೆ. ಚೆನ್ನೈನಲ್ಲಿ ಓದುತ್ತಿರುವ ನನ್ನ ಮಕ್ಕಳನ್ನೂ ಸಾಯಿಸುತ್ತೇನೆ ಎಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ವಸ್ತ್ರ ವಿನ್ಯಾಸಕಿಯ ದೂರಿನ ಮೇರೆಗೆ ವಿಚಾರಣೆಗೆ ಬರುವಂತೆ ಸಂತೋಷ್ ರೆಡ್ಡಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.