ADVERTISEMENT

ಅಜೀಂ ಪ್ರೇಮ್‌ಜಿ ವಿ.ವಿ ನಾಮಫಲಕಕ್ಕೆ ಮಸಿ|ಎಬಿವಿಪಿಯ 25 ಕಾರ್ಯಕರ್ತರ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 20:20 IST
Last Updated 25 ಫೆಬ್ರುವರಿ 2026, 20:20 IST
ಸರ್ಜಾಪುರದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ
ಸರ್ಜಾಪುರದ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ   

ಬೆಂಗಳೂರು: ಸರ್ಜಾಪುರ ಸಮೀಪದ ಬೂರಗುಂಟೆ ಗ್ರಾಮದಲ್ಲಿ ಇರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿ ಗಲಾಟೆ ನಡೆಸಿ, ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) 25 ಕಾರ್ಯಕರ್ತರ ವಿರುದ್ಧ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಂಗಳವಾರ ಸಂಜೆ 5.40ರ ಸುಮಾರಿಗೆ 25 ಮಂದಿಯ ಗುಂಪು ವಿಶ್ವವಿದ್ಯಾಲಯದ ಆವರಣಕ್ಕೆ ನುಗ್ಗಿತ್ತು. ವಿಶ್ವವಿದ್ಯಾಲಯದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಕ್ರಮ ಪ್ರವೇಶ ಮಾಡಿದ್ದ ಪ್ರತಿಭಟನಕಾರರು, ಭದ್ರತಾ ಸಿಬ್ಬಂದಿ ಜಗದೀಶ್, ಚಂದನ್‌, ಚಿತ್ತರ ಬಹದ್ದೂರ್‌, ಶ್ರೀಪತಿ, ನರೇಶ್‌, ಹರೀಶ್‌ ಹಾಗೂ ವಿದ್ಯಾರ್ಥಿ ಮಹಮ್ಮದ್ ಅಲಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ ವಿಶ್ವವಿದ್ಯಾಲಯದ ನಾಮಫಲಕಕ್ಕೂ ಮಸಿ ಬಳಿದು ಹಾನಿಗೊಳಿಸಲಾಗಿದೆ ಎಂಬ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ.  

‘ಕಾರ್ಯಕರ್ತರು ಗುಂಪು ಕಟ್ಟಿಕೊಂಡು ಬೆಂಗಳೂರಿನಿಂದ ಕಾಲೇಜು ಆವರಣಕ್ಕೆ ಬಂದಿದ್ದರು. ಕಾಲೇಜಿನಲ್ಲಿ ಸೈನಿಕರ ವಿರುದ್ಧ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡಿದ್ದರಿಂದ ಕಾರ್ಯಕರ್ತರು ಕಾಲೇಜು ಆವರಣಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಕಾಲೇಜಿನಲ್ಲಿ ಅಂತಹ ಯಾವುದೇ ಕಾರ್ಯಕ್ರಮವನ್ನೂ ನಡೆಸಿಲ್ಲ. ಯಾವ ಸಂಘಟನೆಗೂ ವೇದಿಕೆ ಕಲ್ಪಿಸಿಲ್ಲ’ ಎಂದು ಕಾಲೇಜಿನ ಸಿಬ್ಬಂದಿ ಎಸ್‌.ವಿಲ್ಸನ್‌ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಏನಿದು ಘಟನೆ?:

ವಿಶ್ವವಿದ್ಯಾಲಯದ ಆವರಣಕ್ಕೆ ಮಂಗಳವಾರ ಸಂಜೆ ಎಬಿವಿಪಿ ಕಾರ್ಯಕರ್ತರು ಭಾರತ್‌ ಮಾತಾ ಕೀ ಜೈ ಎಂದು ಘೋಷಣೆಗಳನ್ನು ಕೂಗುತ್ತಾ ಒಳನುಗ್ಗಲು ಪ್ರಯತ್ನಿಸಿದ್ದರು. ವಿಶ್ವವಿದ್ಯಾಲಯದ ನಾಮಫಲಕಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಸಂಘವು (ಎಐಎಸ್‌ಎ) ದೇಶವಿರೋಧಿ ಚಿಂತನೆಯ ಕಾರ್ಯಕ್ರಮ ನಡೆಸುತ್ತಿದೆ. ಆ ಕಾರ್ಯಕ್ರಮಗಳಿಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ವೇದಿಕೆ ಕಲ್ಪಿಸುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಪ್ರತಿಭಟನಕಾರರನ್ನು ಸಮಾಧಾನಪಡಿಸಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ಪ್ರತಿಭಟನಕಾರರನ್ನು ವಶಕ್ಕೆ ಪಡೆದುಕೊಂಡಿದ್ದರು. ಸ್ಥಳದಲ್ಲಿ ಕೆಎಸ್ಆರ್‌ಪಿ ತುಕಡಿ ನಿಯೋಜಿಸಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.