ADVERTISEMENT

ಅವಹೇಳನಕಾರಿ ಹೇಳಿಕೆ: ಬಿಜೆಪಿಯ ಎನ್.ರವಿಕುಮಾರ್ ವಿರುದ್ಧ ಎಫ್‌ಐಆರ್‌

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಕುರಿತು ಅವಹೇಳನಕಾರಿ ಮಾತು ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:30 IST
Last Updated 3 ಜುಲೈ 2025, 15:30 IST
ಎನ್.ರವಿಕುಮಾರ್ 
ಎನ್.ರವಿಕುಮಾರ್    

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದಡಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.

ಜೆ.ಪಿ.ನಗರದ ನಿವಾಸಿ, ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಗರ್ತನಾ ಅವರು ನೀಡಿದ ದೂರಿನ ಮೇರೆಗೆ ಬಿಎನ್‌ಎಸ್‌ ಸೆಕ್ಷನ್‌ಗಳಾದ 351(1), 75(3) 79 ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಸಂಬಂಧ ಎನ್‌.ರವಿಕುಮಾರ್‌ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು.

‘ಬಿಜೆಪಿಯಿಂದ ಜುಲೈ 1ರಂದು ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ವೇಳೆ ರವಿಕುಮಾರ್ ಅವರು ಶಾಲಿನಿ ರಜನೀಶ್‌ ಅವರ ಕುರಿತು ಅಸಂಸದೀಯ ಪದ ಬಳಸಿ ಮಾತನಾಡಿದ್ದಾರೆ. ಅವರ ಹೇಳಿಕೆಯು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅಗೌರವ ತಂದಿದೆ. ಶಾಲಿನಿ ಅವರ ಗೌರವಕ್ಕೆ ಕುಂದು ಉಂಟು ಮಾಡಿ, ಇಡೀ ಮಹಿಳಾ ಕುಲಕ್ಕೆ ಅಗೌರವ ತೋರಿದಂತೆ ಆಗಿದೆ. ರವಿಕುಮಾರ್‌ ಅವರ ಮಾತು ಲೈಂಗಿಕ ಅರ್ಥ ಬರುವ ಮಾತಾಗಿದೆ. ಮುಖ್ಯ ಕಾರ್ಯದರ್ಶಿಯವರ ಖ್ಯಾತಿಗೆ ಹಾನಿ ಉಂಟು ಮಾಡಿದೆ’ ಎಂದು ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎನ್‌.ಮನೋಹರ್ ಅವರೂ ಎನ್.ರವಿಕುಮಾರ್ ಅವರ ವಿರುದ್ಧ ಬುಧವಾರ ದೂರು ನೀಡಿದ್ದರು.

ಆರು ದಿನಗಳಲ್ಲಿ ವರದಿ ನೀಡುವಂತೆ ಪತ್ರ

‘ಎನ್‌.ರವಿಕುಮಾರ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಆರು ದಿನಗಳಲ್ಲಿ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ಗೆ ಪತ್ರ ಬರೆಯಲಾಗಿದೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದರು. 

 ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರವಿಕುಮಾರ್‌ ಅವರು ಶಾಲಿನಿ ರಜನೀಶ್ ಕುರಿತು ಅಸಂಸದೀಯ ಹಾಗೂ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿರುವುದು ಖಂಡನೀಯ. ಅವರ ಹೇಳಿಕೆಗಳು ಸಮಸ್ತ ಮಹಿಳಾ ಕುಲಕ್ಕೆ ಕುಂದುತರುವಂತೆ ಇವೆ’ ಎಂದು ಹೇಳಿದರು. 

‘ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.