ADVERTISEMENT

ಪಿಎಸ್‌ಐ, ಕಾನ್‌ಸ್ಟೆಬಲ್‌ ವಿರುದ್ಧ ಎಫ್ಐಆರ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 5:14 IST
Last Updated 20 ನವೆಂಬರ್ 2019, 5:14 IST

ಬೆಂಗಳೂರು: ಪ್ರಕರಣವೊಂದರ ತನಿಖೆಗಾಗಿ ಮನೆಗೆ ಬಂದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮತ್ತು ಕಾನ್‌ಸ್ಟೆಬಲ್‌, ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.

ಹೊಮ್ಮದೇವನಹಳ್ಳಿ ನಿವಾಸಿ ಮಂಗಳಾ ಮತ್ತು ಅವರ ಪತಿ ನಾಗೇಶ್ ಈ ಆರೋಪ ಮಾಡಿದ್ದಾರೆ. ಮಂಗಳಾ ಅವರು ನೀಡಿದ ದೂರಿನ ಅನ್ವಯ, ಹುಳಿಮಾವು ಠಾಣೆಯ ಸಬ್ ಇನ್‌ಸ್ಪೆಕ್ಟರ್ ಚಿದಾನಂದ ನಾವಿ ಮತ್ತು ಕಾನ್‌ಸ್ಟೆಬಲ್‌ ಚಂದ್ರೇಗೌಡ ವಿರುದ್ಧ ಅದೇ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

’ಇದೇ ವರ್ಷ ಮೇ 7ರಂದು 2.30ರ ಸುಮಾರಿಗೆ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್‌ ಅತಿಕ್ರಮವಾಗಿ ಮನೆ ಪ್ರವೇಶಿಸಿದ್ದರು. ಚಿದಾನಂದ ಅವರು ನಾಗೇಶ್‌ ಅವರನ್ನು ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ. ಸಹಾಯಕ್ಕೆ ಧಾವಿಸಿದಾಗ ಕಾನ್‌ಸ್ಟೆಬಲ್‌, ಜುಟ್ಟು ಹಿಡಿದುಕೊಂಡು ಅಂಗಾಂಗ ಮುಟ್ಟಿ ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ದೂರಿನಲ್ಲಿ ಮಂಗಳಾ ಆರೋಪಿಸಿದ್ದಾರೆ.

ADVERTISEMENT

ಘಟನೆ ಸಂಬಂಧ ಮಂಗಳಾ ಅವರು 5ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶಿಸಿದೆ. ಕೋರ್ಟ್ ಆದೇಶದಂತೆ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್‌ ವಿರುದ್ಧ ಹರಿತವಾದ ಆಯುಧ ಬಳಸಿ ಹಲ್ಲೆ, ಮಹಿಳೆ ಮೇಲೆ ದೌರ್ಜನ್ಯ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

‘ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತರಲು ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ತೆರಳಿದ್ದಾಗ, ದಂಪತಿ ಈ ಆರೋಪ ಮಾಡಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.