ADVERTISEMENT

ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ವರ್ಗಾವಣೆ ಟಿಪ್ಪಣಿ: ಎಫ್ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 14:45 IST
Last Updated 14 ಫೆಬ್ರುವರಿ 2026, 14:45 IST
   

ಬೆಂಗಳೂರು: ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ವರ್ಗಾವಣೆ ಟಿಪ್ಪಣಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಪ್ರಕರಣದಲ್ಲಿ ವಿಧಾನಸೌಧ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ(ಆಡಳಿತ) ಅರುಣ್ ಫುರ್ಟಾಡೊ ನೀಡಿರುವ ದೂರಿನ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ವಿವಿಧ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಅಧಿಕೃತ ಸಂಖ್ಯೆ, ದಿನಾಂಕವಿಲ್ಲದ ಟಿಪ್ಪಣಿ ಜಾಲತಾಣದಲ್ಲಿ ಹರಿದಾಡಿದ್ದು, ​ಮುಖ್ಯಮಂತ್ರಿ ಸಚಿವಾಲಯದ ಇ-ತಂತ್ರಾಂಶದಲ್ಲಿ ನೋಂದಣಿಯಾಗಿಲ್ಲ. ಟಿಪ್ಪಣಿಯನ್ನು ಯಾವುದೇ ಇಲಾಖೆಗೆ ರವಾನಿಸಿಲ್ಲ. ಇದರ ಆಧಾರದಲ್ಲಿ ಯಾವುದೇ ವರ್ಗಾವಣೆ, ನಿಯೋಜನೆ ಆದೇಶ ಸಹ ಹೊರಡಿಸಿಲ್ಲ. ಆದರೂ ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೃತ್ಯವೆಸಗಲಾಗಿದೆ. ಆದ್ದರಿಂದ ನಕಲಿ ಟಿಪ್ಪಣಿ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅರುಣ್ ಫುರ್ಟಾಡೊ ದೂರು ನೀಡಿದ್ದಾರೆ.

ADVERTISEMENT

ಮಂಡ್ಯ ಜಿಲ್ಲೆಯ ಆರೋಗ್ಯ ಕಲ್ಯಾಣಾಧಿಕಾರಿಯಾದ ಡಾ ಕೆ.ಮೋಹನ್ ಅವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನುವಂತೆ ಟಿಪ್ಪಣಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿತ್ತು.

ಈ ವಿಚಾರವಾಗಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ಮುಖ್ಯಮಂತ್ರಿ ಟಿಪ್ಪಣಿ ಎನ್ನಲಾದ ಪತ್ರವೊಂದನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್, ‘ಸಿದ್ದರಾಮಯ್ಯರ ಹಳಿ ತಪ್ಪಿದ ಆಡಳಿತ’ ಎಂದು ಟೀಕಿಸಿದ್ದರು. ಮತ್ತೋರ್ವ ಬಿಜೆಪಿ ಶಾಸಕ ಎಸ್. ಸುರೇಶ್‌ ಕುಮಾರ್ ಅವರು ಇದೇ ಟಿಪ್ಪಣಿಯ ಪತ್ರವನ್ನು ಪೋಸ್ಟ್ ಮಾಡಿದ್ದರು. 

‘ನಕಲಿ ಸುದ್ದಿಗಳನ್ನು ನಂಬಿ ಶೇರ್ ಮಾಡುವ ಮುನ್ನ ಜಾಲತಾಣ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಈಗಿನ ಫೋಟೋಶಾಪ್, ಎಐ ಯುಗದಲ್ಲಿ ವಾಟ್ಸ್‌ಆ್ಯಪ್ ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಇತರರ ಜೊತೆ ಹಂಚಿಕೊಳ್ಳುವುದು ಕೂಡ ಅಪರಾಧ. ಸಕಾರಾತ್ಮಕ ಟೀಕೆಗಳನ್ನು ಸ್ಪೀಕರಿಸಲು ನಾವು ಮುಕ್ತ ಮನಸ್ಸಿನಿಂದ ಇದ್ದೇವೆ. ಆದರೆ, ಸುಳ್ಳು ಸುದ್ದಿಗಳ ಅಪಪ್ರಚಾರವನ್ನು ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ‘ಎಕ್ಸ್‌‘ ಖಾತೆಯಲ್ಲಿ ಎಚ್ಚರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.