ಬೆಂಗಳೂರು: ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದ್ದು, ಪೀಠೋಪಕರಣ ಹಾಗೂ ಕೆಲ ದಾಖಲೆಗಳು ಸುಟ್ಟಿವೆ.
‘ಬ್ಯಾಟರಾಯನಪುರದ ಅಮೃತಹಳ್ಳಿ ಮುಖ್ಯರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ ಎರಡನೇ ಮಹಡಿಯಲ್ಲಿ ಎಂಜಿನಿಯರ್ ಕಚೇರಿ ಇದೆ. ಅದೇ ಕಚೇರಿಯ ಎ.ಸಿ.ಯಲ್ಲಿ (ಹವಾನಿಯಂತ್ರಿತ) ತಾಂತ್ರಿಕ ದೋಷ ಕಾಣಿಸಿಕೊಂಡು, ಮಧ್ಯಾಹ್ನ 1.15 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಕ್ರಮೇಣ ಕೆನ್ನಾಲಗೆ ಹೆಚ್ಚಾಗಿ ಇಡೀ ಕೊಠಡಿಯಲ್ಲಿ ಬೆಂಕಿ ಧಗ ಧಗ ಉರಿಯಲಾರಂಭಿಸಿತ್ತು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.
‘ಎಂಜಿನಿಯರ್ ಕಚೇರಿ ಸಮೀಪದಲ್ಲೇ ದಾಖಲೆಗಳ ಸಂಗ್ರಹ ಕೊಠಡಿ ಇದ್ದು, ಅಲ್ಲಿಯೂ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಹೋಗಿ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು’ ಎಂದೂ ತಿಳಿಸಿದರು.
‘ಕಚೇರಿಯಲ್ಲಿದ್ದ ಪೀಠೋಪಕರಣ ಹಾಗೂ ಹಲವು ದಾಖಲೆಗಳು ಸುಟ್ಟಿವೆ. ಬೆಂಕಿ ಹೊತ್ತಿಕೊಂಡಿದ್ದು ಆಕಸ್ಮಿಕವೋ ಅಥವಾ ಬೇರೆ ಏನಾದರೂ ಕಾರಣ ಇದೆಯಾ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಹೇಳಿದರು.
ಅನುಮಾನ: ಬಿಬಿಎಂಪಿ ವಲಯ ಕಚೇರಿ ಮೇಲೆ ಇತ್ತೀಚೆಗಷ್ಟೇ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದರು. ಅದೇ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
‘ದಾಖಲೆಗಳನ್ನು ನಾಶ ಮಾಡಲು ಬೆಂಕಿ ಅವಘಡ ಸೃಷ್ಟಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಮೃತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.