ADVERTISEMENT

ಬಾರ್‌ ಎಂದುಕೊಂಡು ಕಾಂಡಿಮೆಂಟ್‌ ಅಂಗಡಿ ಮುಂದೆ ಬೆಂಕಿ ಹಚ್ಚಿದರು!

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 19:31 IST
Last Updated 21 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕುಡಿದ ಮತ್ತಿನಲ್ಲಿ ಬಾರ್‌ ಎಂದುಕೊಂಡು ಕಾಂಡಿಮೆಂಟ್‌ ಅಂಗಡಿ ಎದುರು ಬೆಂಕಿ ಹಚ್ಚಿದ್ದ ಇಬ್ಬರನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ಚಿಂಚೋಳಿ ಗ್ರಾಮದ ಮೌನೇಶ ಕರಿಹೋಳೆ (27) ಹಾಗೂ ಮೌನೇಶ ಸಣ್ಣಗೌಡರ್‌ (26) ಬಂಧಿತರು.

‘ಕೋಣನಕುಂಟೆ ಕ್ರಾಸ್‌ ಬಳಿಯ ವಸಂತಪುರ ಮುಖ್ಯರಸ್ತೆ ಬಳಿ ಇರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಇದೇ 15ರಂದು ಹೋಗಿದ್ದ ಆರೋಪಿಗಳು ವಿಪರೀತ ಮದ್ಯ ಸೇವಿಸಿ ಬಾರ್‌ನ ಶೌಚಾಲಯದ ಎದುರು ಅಳವಡಿಸಲಾಗಿದ್ದ ಸಿಂಕ್‌ ಒಡೆದು ಹಾಕಿದ್ದರು. ಬಾರ್‌ನ ಕ್ಯಾಷಿಯರ್‌ ಮತ್ತು ಸಿಬ್ಬಂದಿಆರೋಪಿಗಳಿಂದ ದಂಡ ವಸೂಲಿ ಮಾಡಿ ಬಳಿಕ ಆಚೆ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ತಮಗೆ ಅವಮಾನ ಮಾಡಿದ ಕ್ಯಾಷಿಯರ್‌ಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿದ್ದ ಆರೋಪಿಗಳು ಬಾರ್‌ ಎದುರಿನ ಪಾದಚಾರಿ ಮಾರ್ಗದಲ್ಲಿ ಬೆಂಕಿ ಹಚ್ಚಲು ತೀರ್ಮಾನಿಸಿದ್ದರು. ಇದೇ 16ರ ರಾತ್ರಿ 1.30ರ ಸುಮಾರಿಗೆ ಪಾನಮತ್ತರಾಗಿ ಬಾರ್‌ ಬಳಿ ಹೋಗಿದ್ದ ಅವರು ಬಾರ್‌ ಎಂದುಕೊಂಡು ಪಕ್ಕದಲ್ಲೇ ಇದ್ದ ಕಾಂಡಿಮೆಂಟ್ಸ್‌ ಎದುರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ. ಯಾವ ವಸ್ತುಗಳಿಗೂ ಹಾನಿಯಾಗಿಲ್ಲ’ ಎಂದು ಹೇಳಿದ್ದಾರೆ.

‘ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದಪ್ರಕರಣದ ಪ್ರಮುಖ ಆರೋಪಿಕರಿಹೋಳೆ, ನಾಗರಬಾವಿಯ ಆಂಜನೇಯ ದೇವಸ್ಥಾನದ ಬಳಿ ನೆಲೆಸಿದ್ದ. ಯಲಚೇನಹಳ್ಳಿಯ ಕಾಶಿನಗರ ನಿವಾಸಿಯಾಗಿರುವ ಮೌನೇಶ ಸಣ್ಣಗೌಡರ್‌ ಗಾರೆ ಕೆಲಸ ಮಾಡಿಕೊಂಡಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.