ADVERTISEMENT

ರೌಡಿ ಮೇಲೆ ಮಹಿಳಾ ಇನ್‌ಸ್ಪೆಕ್ಟರ್‌ ಫೈರಿಂಗ್

14 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಗುಂಡ ಬಂಧನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 22:56 IST
Last Updated 21 ಫೆಬ್ರುವರಿ 2020, 22:56 IST

ಬೆಂಗಳೂರು: ತನ್ನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ರೌಡಿ ಸ್ಟೀಫನ್ ಫರ್ನಾಂಡಿಸ್ ಅಲಿಯಾಸ್ ಗುಂಡ ಎಂಬಾತನ ಕಾಲಿಗೆ ಗುಂಡು ಹೊಡೆದು ತುಮಕೂರಿನ ತಿಲಕ್‌ ಪಾರ್ಕ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಪಾರ್ವತಮ್ಮ ಬಂಧಿಸಿದ್ದಾರೆ.

ಕೊಲೆ, ಕೊಲೆಯತ್ನ ಸೇರಿದಂತೆ 14 ಕ್ರಿಮಿನಲ್ ಪ್ರಕರಣಗಳಲ್ಲಿಭಾಗಿಯಾಗಿ ಗುಂಡ ಆರು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ. ತುಮಕೂರಿನ ಜಯನಗರ ಠಾಣೆಯ ರೌಡಿಪಟ್ಟಿಯಲ್ಲಿ ಈತನ ಹೆಸರಿದೆ. ‌ಆರೋಪಿಯು ಬೆಂಗಳೂರಿನ ಸೋಲದೇವನಹಳ್ಳಿ, ಮಲ್ಲಸಂದ್ರದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಆಧರಿಸಿ ಪಾರ್ವತಮ್ಮ ನೇತೃತ್ವದಲ್ಲಿ ತಿಲಕ್ ಪಾರ್ಕ್ ಪೊಲೀಸರ ತಂಡ ನಗರಕ್ಕೆ ಬಂದಿತ್ತು.

2017ರಲ್ಲಿ ತುಮಕೂರಿನಲ್ಲಿ ಮಂಜ ಎಂಬಾತನ ಕೊಲೆಯ ಬಳಿಕ ಕೊಲೆಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಗುಂಡ ಭಾಗಿಯಾಗಿದ್ದ. ಜೈಲಿಗೂ ಹೋಗಿದ್ದ ಈತ, ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಆತನ ಬಂಧನಕ್ಕೆ ವಾರೆಂಟ್ ಜಾರಿಯಾಗಿತ್ತು.

ADVERTISEMENT

ಸೋಲದೇವನಹಳ್ಳಿ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ಜೊತೆ ಪಾರ್ವತಮ್ಮ ನೇತೃತ್ವದಲ್ಲಿ ಪೊಲೀಸರ ತಂಡ ಶುಕ್ರವಾರ ಸಂಜೆ ಆರೋಪಿಯ ಬಂಧನಕ್ಕೆ ಮಲ್ಲಸಂದ್ರಕ್ಕೆ ತೆರಳಿತ್ತು. ಬಂಧಿಸಲು ಮುಂದಾದ ಕಾನ್‌ಸ್ಟೆಬಲ್‌ ಶ್ರೀನಿವಾಸ್ ಮತ್ತು ಮಂಜುನಾಥ ಎಂಬುವರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಗುಂಡ ಯತ್ನಿಸಿದ್ದ.

ತಕ್ಷಣ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೆ ಹಲ್ಲೆ ಮಾಡಲು ಮುಂದಾದಾಗ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು. ಆರೋಪಿ ಮತ್ತು ಗಾಯಾಳು ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.