ADVERTISEMENT

ಫ್ಲೇವರ್ಸ್ ಆಫ್ ಗಂಧದ ಗುಡಿ: ಆಹಾರೋತ್ಸವದ ಮೂಲಕ ಪುನೀತ್‌ಗೆ ಶ್ರದ್ಧಾಂಜಲಿ

ಸ್ನೇಹಾ ರಮೇಶ್
Published 27 ಅಕ್ಟೋಬರ್ 2022, 21:00 IST
Last Updated 27 ಅಕ್ಟೋಬರ್ 2022, 21:00 IST
ಜಯನಗರದ ಬಸವೇಶ್ವರ ಖಾನಾವಳಿಯಲ್ಲಿ ಪುನೀತ್ ಕಟ್‌ಔಟ್‌
ಜಯನಗರದ ಬಸವೇಶ್ವರ ಖಾನಾವಳಿಯಲ್ಲಿ ಪುನೀತ್ ಕಟ್‌ಔಟ್‌   

ಬೆಂಗಳೂರು: ಪುನೀತ್ ರಾಜ್‌ಕುಮಾರ್‌ ಅಗಲಿ ಒಂದು ವರ್ಷವಾದ ಸಂದರ್ಭದಲ್ಲಿ ಅವರ ಸ್ಮರಣೆಯಲ್ಲಿ ‘ಫ್ಲೇವರ್ಸ್ ಆಫ್ ಗಂಧದ ಗುಡಿ’ (ಗಂಧದ ಗುಡಿಯ ಸ್ವಾದಗಳು) ಎನ್ನುವ ವಿಶೇಷ ಆಹಾರೋತ್ಸವವನ್ನು ನಗರದ 100ಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳು ಹಮ್ಮಿಕೊಂಡಿವೆ. ಪುನೀತ್ ಅಭಿನಯದ ಸಾಕ್ಷ್ಯಚಿತ್ರ ‘ಗಂಧದ ಗುಡಿ’ಯನ್ನು ನೋಡಿ ಎಂದು ಗ್ರಾಹಕರನ್ನು ಪ್ರೀತಿಪೂರ್ವಕವಾಗಿ ಒತ್ತಾಯಿಸುವ ಅಭಿಯಾನವೂ ಈ ಆಹಾರೋತ್ಸವದ ಭಾಗವಾಗಿದೆ.

‘ಪುನೀತ್ ಖುದ್ದು ಆಹಾರಪ್ರಿಯರಾಗಿದ್ದರು. ಪದೇ ಪದೇ ನಗರದ ವಿವಿಧ ರೆಸ್ಟೊರೆಂಟ್‌ಗಳಿಗೆ ಭೇಟಿ ನೀಡುತ್ತಿದ್ದರು. ತಾವು ಭೇಟಿ ನೀಡುತ್ತಿದ್ದ ರೆಸ್ಟೊರೆಂಟ್‌ಗಳ ಮಾಲೀಕರು ಹಾಗೂ ಅಡುಗೆಯವರ ಜತೆಗೆ ಸೌಹಾರ್ದಯುತ ಸಂಬಂಧವೂ ಅವರಿಗೆ ಇತ್ತು. ಹೀಗಾಗಿ ಅವರ ಅಭಿಮಾನಿಗಳ ಸಲಹೆಯ ಮೇರೆಗೆ ಗಂಧದ ಗುಡಿಯ ಸ್ವಾದಗಳು’ ಎನ್ನುವ ಆಹಾರೋತ್ಸವ ಹಮ್ಮಿಕೊಂಡೆವು’ ಎಂದು ಬೃಹತ್ ಬೆಂಗಳೂರು ಹೋಟೆಲಿಯರ್ಸ್ ಒಕ್ಕೂಟದ (ಬಿಬಿಎಚ್‌ಎ) ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.

ಕೆಲವು ರೆಸ್ಟೊರೆಂಟ್‌ಗಳು ಕಳೆದ ವಾರಾಂತ್ಯದಲ್ಲಿ ಎರಡು ದಿನ ಅಪ್ಪು ಹೆಸರಿನಲ್ಲಿ ಆಹಾರೋತ್ಸವವನ್ನು ಆಯೋಜಿಸಿದ್ದವು. ಇನ್ನು ಕೆಲವು ರೆಸ್ಟೊರೆಂಟ್‌ಗಳು ಅಭಿಮಾನಿಗಳಿಂದ ಬಂದ ಉತ್ತಮ ಪ್ರತಿಕ್ರಿಯೆ ಕಂಡು ಆಹಾರೋತ್ಸವವನ್ನು ನವೆಂಬರ್‌ 5ರ ವರೆಗೆ ವಿಸ್ತರಿಸಿವೆ.

ADVERTISEMENT

ಪುನೀತ್ ಇಷ್ಟದ ದೊನ್ನೆ ಬಿರಿಯಾನಿ, ಅಕ್ಕಿ ರೊಟ್ಟಿ, ಹುರಿದ ಮೀನು, ನಳ್ಳಿ ಮೂಳೆ, ತಟ್ಟೆ ಇಡ್ಲಿ, ಹೂಕೋಸು ಪಲ್ಯ, ತರಕಾರಿ ಫ್ರೈ, ಮಸಾಲ ಉದ್ದಿನ ವಡೆ ಹಾಗೂ ಮಲ್ಲಿಗೆ ಜಾಮೂನನ್ನು ಒಳಗೊಂಡ ಖಾದ್ಯಗಳನ್ನು ಬಾಣಸಿಗ ಚೆಲುವ ನಾರಾಯಣ ಅವರು ಹೊರ ವರ್ತುಲ ರಸ್ತೆಯ ‘ರ‍್ಯಾಡಿಸನ್ ಬ್ಲೂ’ ರೆಸ್ಟೊರೆಂಟ್‌ನಲ್ಲಿ ಸಿದ್ಧಪಡಿಸಿ ಅಭಿಮಾನಿಗಳಿಗೆ ಉಣಬಡಿಸುತ್ತಿದ್ದಾರೆ. ಈ ಖಾದ್ಯಗಳೆಲ್ಲ ಪುನೀತ್ ಮೆಚ್ಚಿದಂಥವು. ‘ಪುನೀತ್‌ಗೆ ಇದು ಖಾದ್ಯಗಳ ಮೂಲಕ ಸಲ್ಲಿಸುತ್ತಿರುವ ಶ್ರದ್ಧಾಂಜಲಿ’ ಎಂದೇ ಅವರು ಭಾವಿಸಿದ್ದಾರೆ.

ಅನೇಕ ರೆಸ್ಟೊರೆಂಟ್‌ಗಳು ಪುನೀತ್‌ ಇಷ್ಟಪಡುತ್ತಿದ್ದ ತಿನಿಸುಗಳನ್ನೇ ಅವರ ನೆನಪಿನ ಆಹಾರೋತ್ಸವದಲ್ಲಿ ಗ್ರಾಹಕರಿಗೆ ನೀಡುತ್ತಿವೆ. ಕೆಲವರು ಹೊಸ ಖಾದ್ಯಗಳನ್ನೂ ಸೇರಿಸಿದ್ದಾರೆ ಎಂದು ಪಿ.ಸಿ. ರಾವ್ ಮಾಹಿತಿ ನೀಡಿದರು.

ವಿಶೇಷ ಮೆನು ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್‌ ಕಟ್ಔಟ್‌ಗಳನ್ನು, ಫೋಟೊ ಬೂತ್‌ಗಳನ್ನು ಕೆಲವು ರೆಸ್ಟೊರೆಂಟ್‌ಗಳಲ್ಲಿ ಇರಿಸಲಾಗಿದೆ. ವಿಶೇಷ ರಿಯಾಯಿತಿಯೂ ಕೆಲವು ಕಡೆ ಇರುವುದರಿಂದ ಗ್ರಾಹಕರನ್ನು ಆಕರ್ಷಿಸಿದೆ. ‘ಪುನೀತ್ ಅವರ ಪೋಸ್ಟರ್‌ಗಳನ್ನು ಹಾಗೂ ಕಟ್‌ಔಟ್‌ಗಳನ್ನು ಹಾಕಿದ್ದೇವೆ. ಅವುಗಳೊಟ್ಟಿಗೆ ಫೋಟೊ ತೆಗೆಸಿಕೊಂಡೇ ಎಷ್ಟೋ ಅಭಿಮಾನಿಗಳು ಖುಷಿ ಪಡುತ್ತಾರೆ’ ಎಂದು ಜಯನಗರದ ಬಸವೇಶ್ವರ ಖಾನಾವಳಿಯ ಮಾಲೀಕ ಅಶೋಕ್ ಪೈ ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್‌ನ ‘ರಗೂಸ್‌ ಕಿಚನ್‌’ನ ರಘು ಪೂಜಾರಿ ಹೇಳುವಂತೆ, ಕಳೆದ ವಾರದಿಂದ ಒಂದು ದಿನಕ್ಕೆ ಕನಿಷ್ಠ ಸಾವಿರ ಬಿರಿಯಾನಿಗಳು ಖರ್ಚಾಗುತ್ತಿವೆ. ‘ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಕುದುರುವ ನಿರೀಕ್ಷೆಯೂ ಅವರಿಗಿದೆ. ವಾರದ ಅವಧಿಯಲ್ಲಿ ಸುಮಾರು 8 ಸಾವಿರ ಬಿರಿಯಾನಿಗಳನ್ನು ಜನರು ಇಲ್ಲಿ ಖರೀದಿಸಿದ್ದಾರೆ. ಜನರ ಉತ್ಸಾಹ ಅದ್ಭುತವಾಗಿದೆ’ ಎಂದು ಅವರು ಖುಷಿಪಟ್ಟರು.

ಪುನೀತ್ ಅವರ ಕುಟುಂಬದ ಸದಸ್ಯರೂ ಕೆಲವು ಹೋಟೆಲ್‌ಗಳಿಗೆ ಭೇಟಿ ನೀಡಿ, ಆಹಾರೋತ್ಸವವನ್ನು ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.