ADVERTISEMENT

ಕೇಂದ್ರ ಅಧ್ಯಯನ ತಂಡದಿಂದ ರಾಜ್ಯ ಸರ್ಕಾರಕ್ಕೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 21:34 IST
Last Updated 15 ಡಿಸೆಂಬರ್ 2020, 21:34 IST

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟದ ಬಗ್ಗೆ ಎರಡು ದಿನ ಅಧ್ಯಯನ ನಡೆಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಜಂಟಿ ಕಾರ್ಯದರ್ಶಿ ರಮೇಶಕುಮಾರ್‌ ಘಂಟ ನೇತೃತ್ವದ ಆರು ಮಂದಿಯ ತಂಡ ಮಂಗಳವಾರ ಸಂಜೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಅಧಿಕಾರಿಗಳ ಜತೆ ವಿಚಾರ ವಿನಿಮಯ ನಡೆಸಿತು.

ಭೂಕುಸಿತ ಮತ್ತು ಪ್ರವಾಹದಿಂದ ₹15 ಸಾವಿರ ಕೋಟಿಗೂ ನಷ್ಟ ಉಂಟಾಗಿರುವ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ವರದಿ ನೀಡಿದೆ.

ಈ ವರದಿ ಆಧಾರದಲ್ಲಿ ವಿವಿಧ ಜಿಲ್ಲೆಗಳಿಗೆ ತೆರಳಿ ಸಮೀಕ್ಷೆ ನಡೆಸಿದ ತಂಡ ಸದಸ್ಯರು, ವಸತಿ, ಲೋಕೋಪಯೋಗಿ, ಕಂದಾಯ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ಹೆಚ್ಚುವರಿ ಮಾಹಿತಿ ಮತ್ತು ಸ್ಪಷ್ಟೀಕರಣಗಳನ್ನು ಪಡೆದುಕೊಂಡರು.

ADVERTISEMENT

ಪ್ರವಾಹದಿಂದ ಹಾನಿಯಾದ ಅಂದಾಜಿನ ವಿವರ ಮತ್ತು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಬೆಳೆಹಾನಿ, ಪ್ರವಾಹ ಪರಿಹಾರ, ಮೂಲಸೌಕರ್ಯ ದುರಸ್ತಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ಒಟ್ಟು ಪ್ರವಾಹ ಪರಿಹಾರವಾಗಿ ₹ 1,320.48 ಕೋಟಿ ವೆಚ್ಚ ಮಾಡಿರುವ ಬಗ್ಗೆಯೂ ತಂಡಕ್ಕೆ ಮಾಹಿತಿ ನೀಡಲಾಯಿತು.

‘ಸರ್ಕಾರ ಸಲ್ಲಿಸಿದ್ದ ನಷ್ಟ ಪರಿಹಾರ ವರದಿಯಲ್ಲಿರುವ ಕೆಲವು ಮಾಹಿತಿಗಳನ್ನು ಪರಿಷ್ಕರಿಸಿ ಮತ್ತೆ ವರದಿ ಸಲ್ಲಿಸುವಂತೆ ತಂಡ ಸಲಹೆ ನೀಡಿದೆ. ಕೇಂದ್ರದ ಎನ್‌ಡಿಆರ್‌ಎಫ್‌ನ ಮಾರ್ಗಸೂಚಿ ಮತ್ತು ನಿಯಮಾವಳಿಯಂತೆ ವರದಿಯನ್ನು ಪರಿಷ್ಕರಿಸಿ ಸಲ್ಲಿಸಲಾಗುವುದು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.