ADVERTISEMENT

ಪ್ರವಾಹ: 209 ಸೂಕ್ಷ್ಮ ಸ್ಥಳಗಳಲ್ಲಿ ವಿಶೇಷ ನಿಗಾ

ಮಳೆಗಾಲದ ಪೂರ್ವಸಿದ್ಧತೆ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 23:02 IST
Last Updated 3 ಜೂನ್ 2021, 23:02 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವ 209 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಅನಾಹುತ ತಡೆಯಲು ವಿಶೇಷ ನಿಗಾ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಮಳೆಗಾಲದಲ್ಲಿ ವಿಕೋಪ ಉಂಟಾಗದಂತೆ ತಡೆಯಲು ನಡೆಸಲಾದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಲು ಮುಖ್ಯಮಂತ್ರಿಯವರು ಗುರುವಾರ ವಿಶೇಷ ಸಭೆ ನಡೆಸಿದರು.

ಮಳೆಯಾದಾಗ ವಿಕೋಪ ಸಂಭವಿಸಬಹುದಾದ 58 ಅತಿ ಸೂಕ್ಷ್ಮ ಹಾಗೂ 151 ಸೂಕ್ಷ್ಮ ಪ್ರದೇಶಗಳನ್ನು ನಗರದಲ್ಲಿ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ADVERTISEMENT

‘ನಗರದಲ್ಲಿ 440 ಕಿ.ಮೀ. ಉದ್ದದ ರಾಜಕಾಲುವೆಗೆತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆ ಹೊಂದಿರುವ ರಾಜಕಾಲುವೆಯ ವಾರ್ಷಿಕ ನಿರ್ವಹಣೆಗೆ ಕ್ರಮ ವಹಿಸಲಾಗಿದೆ‘ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ರಾಜಕಾಲುವೆಗಳ ಮೂಲಕ ಕೆರೆಗಳಿಗೆ ಮಳೆನೀರು ಮಾತ್ರ ಹರಿಯುವಂತೆ ಮಾಡುವುದರಿಂದ ಪ್ರವಾಹ ತಪ್ಪಿಸಬಹುದು’ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

‘ಬಿಬಿಎಂಪಿಯ ಎಂಟು ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿಗಳನ್ನು ಹಾಗೂ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಇವುಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ತುರ್ತು ಪರಿಹಾರ ಕಾರ್ಯಕ್ಕೆ ಕೆಲಸದಾಳುಗಳನ್ನು ಹಾಗೂ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ರಸ್ತೆ ಬದಿ ಮಳೆನೀರು ಚರಂಡಿ ಹಾಗೂ ಅಡ್ಡಮೋರಿಗಳ ಹೂಳು ತೆಗೆಯಲಾಗುತ್ತಿದೆ. ರಾಜಕಾಲುವೆಗೆ ಸಂಪರ್ಕಿಸುವ ಚರಂಡಿಗಳನ್ನು ಗುರುತಿಸಿ ಸುಸ್ಥಿತಿಯಲ್ಲಿಡಲು ಕ್ರಮ ವಹಿಸಲಾಗಿದೆ. ದೊಡ್ಡ ಕಾಲುವೆಗಳಲ್ಲಿ 26 ಕಡೆ ನೀರಿನ ಮಟ್ಟವನ್ನು ಗುರುತಿಸುವ ಸಂವೇದಕಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

-0-

ಮಳೆ ವಿವರ ನೀಡಲು ‘ಮೇಘ ಸಂದೇಶ’

‘ಬೆಂಗಳೂರು ಮೇಘ ಸಂದೇಶ ಆ್ಯಪ್‌ನಲ್ಲಿ ಮಳೆಯ ಪ್ರಮಾಣದ ಮಾಹಿತಿ ನೀಡಲಾಗುತ್ತದೆ. ನೀರು ಸಂಗ್ರಹವಾಗಿರುವ ಸ್ಥಳಗಳು, ಜನರಿಗೆ ಸುರಕ್ಷಿತ ಮಾರ್ಗ ಬಳಕೆಯ ಕುರಿತು ಕೂಡಾ ಇದರ ಮಾಹಿತಿ ನೀಡಲಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

-0-

'ವಿಧಾನಸಭಾ ಕ್ಷೇತ್ರಕ್ಕೊಂದು ಕಾರ್ಯಪಡೆ'

‘ಮಳೆಗಾಲದಲ್ಲಿ ಅನಾಹುತ ಸಂಭವಿಸಿದರೆ ತುರ್ತು ನೆರವು ಒದಗಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಕಾರ್ಯಪಡೆಗಳನ್ನು ರಚಿಸಲಾಗುತ್ತದೆ. ಇವುಗಳಿಗೆ ಅಗತ್ಯ ಸಿಬ್ಬಂದಿ, ಸಲಕರಣೆ ಒದಗಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಸಚಿವ ಆರ್‌.ಅಶೋಕ್‌ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ನಿಂತ ನೀರನ್ನು ಹೊರಚೆಲ್ಲಲು ಹೈ ಪ್ರೆಷರ್ ಪಂಪ್ ಬಳಸಲು ಸೂಚಿಸಲಾಗಿದೆ. ಚರಂಡಿಗಳ ಹೂಳು ತೆಗೆಯುವ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.