ADVERTISEMENT

ನೆರೆ ಸಂತ್ರಸ್ತ ವಕೀಲರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 19:03 IST
Last Updated 21 ಆಗಸ್ಟ್ 2019, 19:03 IST

ಬೆಂಗಳೂರು: ‘ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆ ಹಾವಳಿಯಲ್ಲಿ ತೊಂದರೆಗೊಳಗಾಗಿರುವ ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಕೀಲರಿಗೆ ಇದೇ 23ರಂದು ದೇಣಿಗೆ ವಿತರಿಸಲಾಗುವುದು’ ಎಂದು ಬೆಂಗಳೂರು ವಕೀಲರ ಸಂಘ ತಿಳಿಸಿದೆ.

‘ಈ ಕುರಿತಂತೆ ಬೆಂಗಳೂರು ವಕೀಲರ ಸಂಘದ ವತಿಯಿಂದ ಸಂಗ್ರಹಿಸಲಾಗಿರುವ ದೇಣಿಗೆ ಹಾಗೂ ಅಗತ್ಯ ಸಾಮಗ್ರಿಗಳನ್ನು ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಇದೇ 22ರಂದು ಸಂಜೆ 5 ಗಂಟೆಗೆ ಸಿಟಿ ಸಿವಿಲ್‌ ಕೋರ್ಟ್‌ ಆವರಣದಿಂದ ವಾಹನಗಳಲ್ಲಿ ಕೊಂಡೊಯ್ಯಲಿದ್ದಾರೆ. 23ರಂದು ಮಧ್ಯಾಹ್ನ 1.30ಕ್ಕೆ ಬೆಳಗಾವಿ ಜಿಲ್ಲಾ ವಕೀಲರ ಸಂಘದಲ್ಲಿ ವಿತರಿಸಲಿದ್ದಾರೆ’ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಹ: ‘ರಾಷ್ಟ್ರೀಯ ವಿಪತ್ತು’ ಘೋಷಣೆಗೆ ಆಗ್ರಹ

ADVERTISEMENT

ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ‍‍ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.

ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರವಾಹದಿಂದ 50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಜನರ ಬದುಕು ಬೀದಿಗೆ ಬಿದ್ದಿದೆ. ಸಾವಿರಾರು ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಆದರೂ, ಕೇಂದ್ರ ಸರ್ಕಾರ ನಯಾಪೈಸೆ ಪರಿಹಾರ ನೀಡಿಲ್ಲ’ ಎಂದು ಕಿಡಿಕಾರಿದರು.

‘ಕೇಂದ್ರದ ನೀತಿಯನ್ನು ಖಂಡಿಸಿ ರಾಜ್ಯದ ಸಂಸದರು ‍‍‍ಪ್ರತಿಭಟಿಸಿ ಬೀದಿಗೆ ಇಳಿಯಬೇಕು. ಮುಖ್ಯಮಂತ್ರಿ ಸಹ ‍‍ಪ್ರತಿಭಟನೆ ನಡೆಸಬೇಕು. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಹೋರಾಟ ನಡೆಸುತ್ತೇವೆ’ ಎಂದರು.

ರಾಜ್ಯ ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಮೈಸೂರು ದಸರಾ ಸೇರಿದಂತೆ ಎಲ್ಲ ಅದ್ಧೂರಿ ಆಚರಣೆಗಳನ್ನು ನಿಲ್ಲಿಸಿ ಆ ಹಣವನ್ನು ನೆರೆಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕು ಎಂದು ಅವರು ಆಗ್ರಹಿಸಿದರು.

‘ಉತ್ತರ ಕರ್ನಾಟಕದ ಪ್ರವಾಹಪೀಡಿತರ ಸಭೆ ಇದೇ 27ರಂದು ಜಮಖಂಡಿಯಲ್ಲಿ ನಡೆಯಲಿದೆ. ಬಳಿಕ ದಕ್ಷಿಣ ಕರ್ನಾಟಕದ ಪ್ರವಾಹದ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು’ ಎಂದರು.

ಪಿಂಚಣಿ ಮೊತ್ತ ₹20 ಕೋಟಿ ಸಂತ್ರಸ್ತರಿಗೆ

ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಒಂದು ದಿನದ ಪಿಂಚಣಿ ಮೊತ್ತ ₹20 ಕೋಟಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತೀರ್ಮಾನಿಸಿದೆ.

ಸಂಘದ ಅಧ್ಯಕ್ಷ ಎಲ್‌. ಭೈರಪ್ಪ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ 4.20 ಲಕ್ಷ ಪಿಂಚಣಿದಾರರು ಇದ್ದಾರೆ. ಆಗಸ್ಟ್‌ 19 ರಂದು ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಒಂದು ದಿನದ ಪಿಂಚಣಿ ಮೊತ್ತ ₹20 ಕೋಟಿ ಆಗಲಿದೆ’ ಎಂದರು.

ಆಗಸ್ಟ್‌ 23ರಂದು ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಪಿಂಚಣಿ ಅದಾಲತ್‌ ನಡೆಯಲಿದೆ. ನಿವೃತ್ತ ನೌಕರರ ಪಿಂಚಣಿ ಮತ್ತು ಕುಟುಂಬ ಪಿಂಚಣಿಯ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.