ADVERTISEMENT

ನವರಾತ್ರಿ ಆಚರಣೆ: ಹೂವು, ಹಣ್ಣು ದಿಢೀರ್‌ ದುಬಾರಿ

ದಸರಾ ಆಚರಣೆಗೆ ನಿರ್ಬಂಧ ಸಡಿಲ l ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 20:44 IST
Last Updated 17 ಅಕ್ಟೋಬರ್ 2020, 20:44 IST
ಕೆ.ಆರ್‌.ಮಾರುಕಟ್ಟೆಯಲ್ಲಿ ಹೂವಿನ ಖರೀದಿಯಲ್ಲಿ ತೊಡಗಿದ್ದ ಜನ –ಪ್ರಜಾವಾಣಿ ಚಿತ್ರ
ಕೆ.ಆರ್‌.ಮಾರುಕಟ್ಟೆಯಲ್ಲಿ ಹೂವಿನ ಖರೀದಿಯಲ್ಲಿ ತೊಡಗಿದ್ದ ಜನ –ಪ್ರಜಾವಾಣಿ ಚಿತ್ರ   
""

ಬೆಂಗಳೂರು: ನವರಾತ್ರಿ ಆಚರಣೆ ಆರಂಭಗೊಂಡಿರುವುದರಿಂದ ಹೂವು ಮತ್ತು ಹಣ್ಣಿನ ದರಗಳು ದಿಢೀರ್ ಏರಿಕೆ ಕಂಡಿವೆ. ಕೊರೊನಾ ಸಂಕಷ್ಟದಲ್ಲಿ ಸಿಲುಕಿದ್ದ ವ್ಯಾಪಾರ, ಈ ದಸರಾದಿಂದ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ಹೂವಿನ ವ್ಯಾಪಾರ ನೆಲಕಚ್ಚಿತ್ತು. ಹೂವಿನ ಮಾರುಕಟ್ಟೆಗಳನ್ನು ಸ್ಥಗಿತಗೊಳಿಸಿ, ಸರ್ಕಾರದ ವಿಧಿಸಿದ ನಿರ್ಬಂಧಗಳಿಂದ ಹಬ್ಬಗಳು ಸರಳ ಆಚರಣೆಯಲ್ಲಿ ಮುಗಿದವು. ಆದರೆ, ಈಗ ನವರಾತ್ರಿ, ಆಯುಧ ಪೂಜೆ, ವಿಜಯದಶಮಿ ಹಬ್ಬಗಳು ಸಾಲು ಸಾಲಾಗಿ ಆಚರಣೆಗಳು ನಡೆಯಲಿವೆ.

ಇದರಿಂದಾಗಿ ಎರಡು ದಿನಗಳಿಂದ ಗುಲಾಬಿ, ಸೇವಂತಿಗೆ, ಕನಕಾಂಬರ, ಸುಗಂಧರಾಜ, ಗೆನ್ನೇರಿ ಹೂಗಳ ದರ ಏರಿಕೆಯಾಗಿವೆ. ಚೆಂಡು ಹೂವಿನ ದರ ಕಡಿಮೆ ಇದೆ.

ADVERTISEMENT

'ನವರಾತ್ರಿ ಅಂಗವಾಗಿ ಶುಕ್ರವಾರದಿಂದಲೇ ಹೂವಿನ ಖರೀದಿ ಜೋರಾಗಿದೆ. ಮಾರುಕಟ್ಟೆಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಒಂದು ವಾರದ ಆಚರಣೆ ಇರುವುದರಿಂದ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ದರಗಳೂ ಏರಿವೆ' ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ಅಸ್ಲಂ 'ಪ್ರಜಾವಾಣಿ'ಗೆ ತಿಳಿಸಿದರು.

'ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ನವರಾತ್ರಿಯ ಆಚರಣೆ ವೇಳೆ ದೇವರ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳಿಗೆ ಹೂವು ಹೆಚ್ಚಾಗಿ ಬಳಕೆಯಾಗುತ್ತದೆ. ಆಯುಧ ಪೂಜೆ ವಾಹನಗಳ ಅಲಂಕಾರಕ್ಕೆ ಭಾರಿ ಪ್ರಮಾಣದ ಹೂ ಬಳಸುತ್ತಾರೆ. ಈ ವಾರದಲ್ಲಿ ಹೂವಿನ ದರಗಳು ದುಬಾರಿಯಾಗಿವೆ. ನೆಲಕಚ್ಚಿದ್ದ ಹೂವಿನ ವ್ಯಾಪಾರಕ್ಕೆ ಜೀವ ಬಂದಂತಾಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ತರಕಾರಿ ದರಗಳೂ ಏರಿಕೆ: ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್, ಮೆಣಸಿನಕಾಯಿ, ಬೆಂಡೆಕಾಯಿ, ಈರುಳ್ಳಿ ದರಗಳು ಏರಿಕೆ ಕಂಡಿವೆ. ಟೊಮೆಟೊ, ಮೂಲಂಗಿ ಅಗ್ಗವಾಗಿದೆ. 'ಮಳೆಯಿಂದ ಕೆಲ ತರಕಾರಿಗಳ ಕೊರತೆ ಉಂಟಾಗಿದೆ. ಆವಕ ಪ್ರಮಾಣವೂ ಕುಸಿದಿರುವುದರಿಂದ ಬೆಲೆಗಳು ಏರಿವೆ. ಹಬ್ಬ ಇರುವುದರಿಂದ ದರಗಳು ತುಸು ಏರುವ ನಿರೀಕ್ಷೆ ಇದೆ' ಎಂದು ಯಶವಂತಪುರ ಎಪಿಎಂಸಿ ಪ್ರಾಂಗಣದ ತರಕಾರಿ ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.