ADVERTISEMENT

ಕಬ್ಬನ್‌ ಉದ್ಯಾನದಲ್ಲಿ ಹೂಗಳ ಹಬ್ಬ: ಪುಷ್ಪ ಪ್ರದರ್ಶನದಲ್ಲಿ ಕೆಪೆಕ್‌ನ 25 ಮಳಿಗೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 16:07 IST
Last Updated 26 ನವೆಂಬರ್ 2025, 16:07 IST
ಸಿ.ಎನ್. ಶಿವಪ್ರಕಾಶ್
ಸಿ.ಎನ್. ಶಿವಪ್ರಕಾಶ್   

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ನಡೆಯುವ ಪುಷ್ಪ ಪ್ರದರ್ಶನದಲ್ಲಿ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್‌) 25 ಮಳಿಗೆಗಳನ್ನು ಸ್ಥಾಪಿಸಲಿದೆ.

‘ನ.27ರಿಂದ ಡಿಸೆಂಬರ್‌ 7ರವರೆಗೆ ಪುಷ್ಪ ಪ್ರದರ್ಶನದಲ್ಲಿ ಪಿಎಂಎಫ್‌ಎಂಇ ಯೋಜನೆಯಡಿಯಲ್ಲಿ ಸ್ಥಾಪಿಸಿರುವ ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ’ ಎಂದು ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ತಿಳಿಸಿದ್ದಾರೆ. 

‘ತೋಟಗಾರಿಕೆ ಇಲಾಖೆಯೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 11 ದಿನ ನಡೆಯುವ ಈ ಪುಷ್ಟ ಪ್ರದರ್ಶನದಲ್ಲಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಯೋಜನೆಯ (ಪಿಎಂಎಫ್‌ಎಂಇ) ಕುರಿತು ಪ್ರಚಾರ ಮಾಡಲಾಗುತ್ತದೆ. ಜೊತೆಗೆ ಕಿರು ಆಹಾರ ಉದ್ದಿಮೆಗಳನ್ನು ಸ್ಥಾಪಿಸಲು ಈ ಯೋಜನೆ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ₹15 ಲಕ್ಷ ಸಹಾಯ ಧನ ನೀಡುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹಂಚಿಕೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.   

ADVERTISEMENT

‘ಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರು ಸಿದ್ಧ ಸಿರಿಧಾನ್ಯ ಉತ್ಪನ್ನಗಳು, ಉಪ್ಪಿನಕಾಯಿ, ಚಟ್ನಿಪುಡಿ, ಪುಳಿಯೋಗೆರೆ ಮಿಶ್ರಣ, ಸಾಂಬಾರು ಪುಡಿ, ಚಿಕ್ಕಿ, ಒಣಹಣ್ಣು ಲಡ್ಡು, ಗಾಣದ ಎಣ್ಣೆ, ಖಾರದ ಪುಡಿ, ರಾಗಿ ಮಾಲ್ಟ್‌, ಹುರಿಹಿಟ್ಟು, ಬಿಸ್ಕತ್ತುಗಳು, ತೆಂಗು ಆಧಾರಿತ ಉತ್ಪನ್ನಗಳು, ಜೋಳದ ರೊಟ್ಟಿ, ಸಾವಯವ ಬೆಲ್ಲ, ಬಾಕಾಹು, ಗಿಣ್ಣು ಸೇರಿದಂತೆ ಮೊದಲಾದ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಖರೀದಿಸಬಹುದು’ ಎಂದು ತಿಳಿಸಿದ್ದಾರೆ.

25 ಮಳಿಗೆಗಳಲ್ಲಿ ಪಿಎಂಎಫ್‌ಎಂಇ ಯೋಜನೆಯ ವಿವಿಧ ಫಲಾನುಭವಿಗಳು ಉತ್ಪನ್ನಗಳನ್ನು ಪ್ರದರ್ಶನ ಮಾಡಿ ಮಾರಾಟ ಮಾಡಲಿದ್ದಾರೆ
ಸಿ.ಎನ್. ಶಿವಪ್ರಕಾಶ್ ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.