
ಬೆಂಗಳೂರು: ಕೆಎಸ್‌ಆರ್‌ಟಿಸಿಯ ಫ್ಲೈಬಸ್‌ಗಳಲ್ಲಿ ಪ್ರಯಾಣಿಕರಿಗೆ ನ.15ರಿಂದ ನಂದಿನಿ ಉತ್ಪನ್ನಗಳ ಕುರುಕಲು ತಿಂಡಿಗಳ ‘ಕಿಟ್’ ಉಚಿತವಾಗಿ ದೊರೆಯಲಿದೆ.
ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ನೇರ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ ನೂತನ ಫ್ಲೈಬಸ್‌ಗೆ (ವೋಲ್ವೋ ಮಲ್ಟಿ ಆಕ್ಸೆಲ್) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಚಾಲನೆ ನೀಡಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದರು.
ಕಿಟ್‌ನಲ್ಲಿ ನೀರಿನ ಬಾಟಲ್, ಸುವಾಸನೆಯ ಹಾಲು (ಫ್ಲೇವರ್ಡ್ ಮಿಲ್ಕ್), ಸಿಹಿ ಮತ್ತು ಖಾರದ ಕುಕ್ಕೀಸ್, ಕೇಕ್, ಕೋಡುಬಳೆ ಇರಲಿದೆ. ಕಿಟ್ ಅನ್ನು ಬ್ರ್ಯಾಂಡ್ ಮಾಡಲಾಗಿದ್ದು, ಅದರ ಹಿಂಬದಿಯಲ್ಲಿ ನಿಗಮದ ಸುಖಾಸೀನ ಸಂಚಾರ ಬಸ್‌ಗಳ ದಕ್ಷಿಣ ಭಾರತದ ಸಂಚಾರ ಸ್ಥಳಗಳ ಮಾಹಿತಿ ಮತ್ತು ಟಿಕೆಟ್ ಬುಕ್ ಮಾಡಲು ಅನುಕೂಲವಾಗುವಂತೆ ಕ್ಯೂಆರ್ ಕೋಡ್ ಸ್ಕ್ಯಾನರ್ ಮುದ್ರಿಸಲಾಗಿದೆ ಎಂದು ತಿಳಿಸಿದರು.
‘ನಾನು 2013ರಲ್ಲಿ ಸಾರಿಗೆ ಸಚಿವನಾಗಿದ್ದ ಸಂದರ್ಭದಲ್ಲಿ ಮೊದಲ ಫ್ಲೈಬಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಆರಂಭವಾಗಿತ್ತು. ಸದ್ಯ ಮೈಸೂರಿಗೆ 9, ದಾವಣಗೆರೆಗೆ 2, ಮಡಿಕೇರಿಗೆ 2, ಕುಂದಾಪುರಕ್ಕೆ 2 ಫ್ಲೈಬಸ್‌ಗಳು ಸಂಚರಿಸುತ್ತಿವೆ’ ಎಂದು ವಿವರಿಸಿದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕರಾದ ಕೆ. ನಂದಿನಿ ದೇವಿ , ಇಬ್ರಾಹಿಂ ಮೈಗೂರ, ಕೆಐಎಎಲ್ ಮುಖ್ಯ ವಾಣಿಜ್ಯ ಅಧಿಕಾರಿ ಕೆನೆತ್, ಉಪಾಧ್ಯಕ್ಷ ಪ್ರವತ್, ವ್ಜವಸ್ಥಾಪಕ ಚಂದ್ರ, ಕೆಎಂಎಫ್ ಅಧಿಕಾರಿ ಸ್ವಾತಿ ರೆಡ್ಡಿ ಉಪಸ್ಥಿತರಿದ್ದರು.
ನೂತನ ಫ್ಲೈಬಸ್ ಸಂಚಾರ ಮಾಹಿತಿ
ಕೆಂಪೇಗೌಡ ವಿಮಾನನಿಲ್ದಾಣದಿಂದ ರಾತ್ರಿ 12.45ಕ್ಕೆ ಮತ್ತು ಬೆಳಿಗ್ಗೆ 10ಕ್ಕೆ ಹೊರಡಲಿದೆ. ದಾವಣಗೆರೆಗೆ ಬೆಳಿಗ್ಗೆ 5.45 ಮತ್ತು ಮಧ್ಯಾಹ್ನ 3ಕ್ಕೆ ತಲುಪಲಿದೆ. ದಾವಣಗೆರೆಯಿಂದ ಬೆಳಿಗ್ಗೆ 8 ಮತ್ತು ಸಂಜೆ 5ಕ್ಕೆ ಬಸ್ ಹೊರಡಲಿದೆ. ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1 ಮತ್ತು ರಾತ್ರಿ 10ಕ್ಕೆ ತಲುಪಲಿದೆ. ಪ್ರಯಾಣದರವು ವಿಮಾನ ನಿಲ್ದಾಣದಿಂದ ತುಮಕೂರಿಗೆ ₹400 ಚಿತ್ರದುರ್ಗಕ್ಕೆ ₹980 ದಾವಣಗೆರೆಗೆ ₹1250 ನಿಗದಿಪಡಿಸಲಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಯಾಟಲೈಟ್ ಟೌನ್ ರಿಂಗ್‌ರೋಡ್ ಮೂಲಕ ದೊಡ್ಡಬಳ್ಳಾಪುರ ಬೈಪಾಸ್– ದಾಬಸ್‌ಪೇಟೆ –ತುಮಕೂರು ಬೈಪಾಸ್– ಚಿತ್ರದುರ್ಗ ಬೈಪಾಸ್ ಮೂಲಕ ದಾವಣಗೆರೆಗೆ ತಲುಪಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ತುಮಕೂರು ಬೈಪಾಸ್ ಹಾಗೂ ಚಿತ್ರದುರ್ಗ ಬೈಪಾಸ್ ಸೇರಿ ಎರಡು ಮಾರ್ಗ ಮಧ್ಯದ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.