ADVERTISEMENT

ಸಂಚಾರ ದಟ್ಟಣೆ ನಿವಾರಿಸಲು ಬನಶಂಕರಿ ಜಂಕ್ಷನ್‌ನಲ್ಲಿ ಮೇಲ್ಸೇತುವೆಗೆ ಚಿಂತನೆ

ಐದು ಜಂಕ್ಷನ್‌ಗಳಲ್ಲಿ ಸಿಗ್ನಲ್‌ಮಕ್ತ ಸಂಚಾರ: ಪರಿಶೀಲನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 23:30 IST
Last Updated 19 ಆಗಸ್ಟ್ 2023, 23:30 IST
ಬನಶಂಕರಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮಾಲೋಚನೆ ನಡೆಸಿದರು
ಬನಶಂಕರಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮಾಲೋಚನೆ ನಡೆಸಿದರು   

ಬೆಂಗಳೂರು: ಕನಕಪುರ ರಸ್ತೆ– ಬನಶಂಕರಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಲು 2.5 ಕಿ.ಮೀ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬನಶಂಕರಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿರುವ ಬಗ್ಗೆ ಶನಿವಾರ ಸ್ಥಳ ಪರಿಶೀಲನೆ ಮಾಡಿದ ಶಿವಕುಮಾರ್‌ ಅವರು, ಮೆಟ್ರೊ, ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಬಿಎಂಆರ್‌ಸಿಎಲ್‌ನಿಂದ ಬನಶಂಕರಿ ಜಂಕ್ಷನ್‌ನಲ್ಲಿ ₹45 ಕೋಟಿ ವೆಚ್ಚದಲ್ಲಿ ಸ್ಕೈವಾಕ್‌ ನಿರ್ಮಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ಅಂಜುಂ ಪರ್ವೇಜ್‌ ಹೇಳಿದರು. ಆದರೆ, ಅಷ್ಟೊಂದು ವೆಚ್ಚ ಮಾಡಿದರೂ ಅದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ADVERTISEMENT

ಬನಶಂಕರಿ ಜಂಕ್ಷನ್‌ನಲ್ಲಿ ಇದೀಗ ಹೆಚ್ಚಿನ ಸಂಚಾರ ದಟ್ಟಣೆ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ದೂರದೃಷ್ಟಿಯಿಂದ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಈ ಜಂಕ್ಷನ್ ಸೇರಿದಂತೆ ಐದಾರು ಜಂಕ್ಷನ್‌ಗಳಲ್ಲಿ ಸಿಗ್ನಲ್‌ ರಹಿತ ಸಂಚಾರಕ್ಕೆ ಅನುವಾಗುವಂತೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಘುನಾಥ ನಾಯ್ಡು ಮನವಿ ಮಾಡಿಕೊಂಡರು.

‘2.5 ಕಿ.ಮೀ ಮೇಲ್ಸೇತುವೆಯನ್ನು ಯಡಿಯೂರು ಟರ್ಮಿನಸ್‌ನಿಂದ ಆರಂಭಿಸಿ ಬನಶಂಕರಿ ಜಂಕ್ಷನ್‌ ಮೂಲಕ ಕನಕಪುರ ರಸ್ತೆಗೆ ಸಂಪರ್ಕಿಸುವ ಯೋಜನೆ ಇದಾಗಿದೆ. ಇದರಿಂದ ಟಾಟಾ ಸಿಲ್ಕ್‌ ಫಾರ್ಮ್‌ ಜಂಕ್ಷನ್‌,  ಯಡಿಯೂರು ಜಂಕ್ಷನ್‌, ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್‌, ಜೆಎಸ್‌ಎಸ್‌ ಕಾಲೇಜು ಜಂಕ್ಷನ್‌, ಹುಣಸೆಮರ ಜಂಕ್ಷನ್‌, ಬನಶಂಕರಿ ಜಂಕ್ಷನ್‌ನಲ್ಲಿ ಸಂಚಾರ ಸಿಗ್ನಲ್‌ ಮುಕ್ತವಾಗಲಿದ್ದು, ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಸುಮಾರು ₹200 ಕೋಟಿ ವೆಚ್ಚವಾಗಲಿದೆ’ ಎಂಬ ಪ್ರಸ್ತಾವ ಸಲ್ಲಿಸಿದರು.

ಇದನ್ನು ಪರಿಶೀಲಿಸಿದ ಡಿಸಿಎಂ, ಈ ಯೋಜನೆ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹಾಗೂ ದಕ್ಷಿಣ ವಲಯದ ಆಯುಕ್ತ ಜಯರಾಂ ರಾಯಪುರ ಅವರಿಗೆ ಸೂಚನೆ ನೀಡಿದರು.

ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.

ರಾಜೀವ್ ಗಾಂಧಿ ಅವರ ಪ್ರತಿಮೆಯ ವಿನ್ಯಾಸ ಸಿದ್ದವಾಗುತ್ತಿರುವ ಇಟ್ಟಮಡುವಿಗೆ ಸಚಿವರು ಭೇಟಿ ನೀಡಿ ವಿನ್ಯಾಸ ನಿರ್ಮಾಣ ಕಾರ್ಯ ಪರಿಶೀಲಿಸಿದರು. ಗಾಂಧಿಬಜಾರ್ ವಿದ್ಯಾರ್ಥಿ ಭವನದಲ್ಲಿ ಮಾಜಿ ಶಾಸಕ ಆರ್.ವಿ. ದೇವರಾಜ್, ಮಾಜಿ ಮೇಯರ್ ಪಿ.ಆರ್. ರಮೇಶ್, ಕೆಪಿಸಿಸಿ ವಕ್ತಾರ ಡಾ ಶಂಕರ್ ಗುಹಾ ಅವರೊಂದಿಗೆ ಡಿಸಿಎಂ ಉಪಾಹಾರ ಸೇವಿಸಿದರು.

ಈಜಿಪುರ ಮೇಲ್ಸೇತುವೆ: ಸಚಿವ ಸಂಪುಟದಲ್ಲಿ ಚರ್ಚೆ ‘ಈಜಿಪುರ ಮೇಲ್ಸೇತುವೆ 3 ಕಿ.ಮೀ ಉದ್ದ ಇದ್ದು ಕಾಮಗಾರಿ ನಿಂತಿದೆ. ಇದೀಗ ಟೆಂಡರ್‌ ಅಂತಿಮಗೊಳಿಸುವ ಕೆಲಸ ಬಾಕಿ ಇದ್ದು ಸಚಿವ ಸಂಪುಟದಲ್ಲಿ ಚರ್ಚಿಸಿ ಆದ್ಯತೆ ಮೇರೆಗೆ ಕಾಮಗಾರಿ ತೆಗೆದುಕೊಳ್ಳುತ್ತೇವೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ‘2017ರಲ್ಲಿ ಈ ಯೋಜನೆ ಕಾಮಗಾರಿ ಆರಂಭವಾಗಿದ್ದು ಕೇವಲ ಶೇ 35 ಮಾತ್ರ ಕೆಲಸ ಆಗಿದೆ. ಗುತ್ತಿಗೆ ಕಂಪನಿ ಸಮಸ್ಯೆ ಆಗಿ ಕೆಲಸ ನಿಂತಿದೆ. ಟೆಂಡರ್ ರದ್ದು ಹೊಸ ಟೆಂಡರ್ ಕರೆಯಲಾಗಿತ್ತು. ಹೆಚ್ಚಿನವರು ಆಸಕ್ತಿ ತೋರುತ್ತಿಲ್ಲ. ಸಿಂಗಲ್ ಟೆಂಡರ್ ಆಗಿದ್ದು ಶೇ 19 ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ವಾಸ್ತವಾಂಶ ಅರಿಯಲು ಖುದ್ದಾಗಿ ನಾನು ಹಾಗೂ ರಾಮಲಿಂಗಾರೆಡ್ಡಿ ಅವರು ಬಂದಿದ್ದೇವೆ’ ಎಂದರು. ‘₹100 ಕೋಟಿ ಹೆಚ್ಚುವರಿ ಹಣ ಬೇಕಾಗಿದ್ದು ನಾವೇ ಈ ಯೋಜನೆ ಹೆಚ್ಚುವರಿ ಹಣ ನೀಡಬಹುದೇ ಅಥವಾ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಬಹುದೇ ಎಂದು ಚರ್ಚೆ ಮಾಡುತ್ತೇವೆ’ ಎಂದು ತಿಳಿಸಿದರು. ‘ಒಬ್ಬರು ಮಾಡಿದ ಕೆಲಸಕ್ಕೆ ಬೇರೆಯವರು ಕೈ ಹಾಕಲು ಇಚ್ಛಿಸುವುದಿಲ್ಲ. ಹೀಗಾಗಿ ಕೇವಲ ಒಬ್ಬರು ಟೆಂಡರ್ ನಲ್ಲಿ ಭಾಗವಹಿಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.