ಬೆಂಗಳೂರು: ‘ಗಾಂಧೀಜಿ ಅವರ ಅಹಿಂಸಾ ತತ್ವಗಳು ಮತ್ತು ಸರ್ವೋದಯ ಸಿದ್ಧಾಂತಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು’ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಗಾಂಧಿ ಸಿನಿಮಾ ಕ್ಲಬ್’ ಉದ್ಘಾಟಿಸಿ, ಸಂವಾದ ಸರಣಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಗಾಂಧೀಜಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳನ್ನು ಹರಿಬಿಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರ ಬಗ್ಗೆ ವಾಸ್ತವ ತಿಳಿದುಕೊಳ್ಳಲು ಸಾಹಿತ್ಯ ಕೃತಿಗಳನ್ನು ಓದಬೇಕು. ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಬಳಿಕ ಸ್ವಾತಂತ್ರ್ಯ ಹೋರಾಟದ ಸ್ವರೂಪವನ್ನೇ ಬದಲಾಯಿಸಿದರು’ ಎಂದರು.
‘ಗಾಂಧೀಜಿ ಅವರ ಜೀವನ ಚರಿತ್ರೆ ಹಾಗೂ ತತ್ವಗಳ ಮೇಲೆ ಅನೇಕ ಚಲನಚಿತ್ರಗಳು ಬಂದಿವೆ. ಅವರ ಹೆಸರನ್ನು ಬಳಸಿಕೊಂಡು ಕಮರ್ಷಿಯಲ್ ಚಿತ್ರಗಳನ್ನೂ ನಿರ್ಮಿಸಲಾಗಿದೆ. ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಗಾಂಧೀಜಿ ಅವರು ಭಿನ್ನಾಭಿಪ್ರಾಯ ಇರುವ ವ್ಯಕ್ತಿಗಳ ಜತೆಗೂ ಆರೋಗ್ಯಕರ ಸಂವಾದ ನಡೆಸಿ, ವಿಶ್ವಾಸಕ್ಕೆ ಪಡೆಯುತ್ತಿದ್ದರು. ಇಂದಿನ ಪರಿಸ್ಥಿತಿಗೆ ಈ ರೀತಿಯ ಸಂವಾದಗಳು ಅಗತ್ಯ’ ಎಂದು ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, ‘ನಿಧನದ ನಂತರವೂ ತತ್ವಾದರ್ಶಗಳು ಶಾಶ್ವತವಾಗಿ ಉಳಿಯುತ್ತವೆ. ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರು ಮರೆಯಬಾರದು. ಅವರ ತತ್ವ, ಸಿದ್ಧಾಂತ, ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತ’ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ಎನ್.ಆರ್. ವಿಶುಕುಮಾರ್, ‘ಗಾಂಧಿ ಮತ್ತು ಅಂಬೇಡ್ಕರ್ ಜಗತ್ತಿನ ಎರಡು ಕಣ್ಣುಗಳು. ಇಂತಹ ವ್ಯಕ್ತಿಗಳ ಮೇಲೆ ಅನಗತ್ಯ ದ್ವೇಷ ಸಾಧಿಸಬಾರದು’ ಎಂದು ಹೇಳಿದರು.
ವಿಜಯನಗರ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಶರಣ ಬಸವ ಅವರು ‘ಗಾಂಧೀಜಿ ಅವರ ತತ್ವಾದರ್ಶಗಳ ಪ್ರಸ್ತುತತೆ’ ಬಗ್ಗೆ ಮಾತನಾಡಿದರು.
ಬಳಿಕ ‘ಗಾಂಧಿ’ ಸಿನಿಮಾ ಪ್ರದರ್ಶಿಸಲಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಚಲನಚಿತ್ರ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.