ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾಲಯ: ಗೆದ್ದಲಿಗೆ ಆಹಾರ ಈ ಪುಸ್ತಕಗಳ ರಾಶಿ

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಚಿತ್ರಣ

ಚಂದ್ರಹಾಸ ಹಿರೇಮಳಲಿ
Published 26 ನವೆಂಬರ್ 2022, 19:36 IST
Last Updated 26 ನವೆಂಬರ್ 2022, 19:36 IST
ಬೆಂಗಳೂರು ಕೇಂದ್ರ ವಿವಿ ಆವರಣದಲ್ಲಿ ಪುಸ್ತಕಗಳನ್ನು ಕಸದ ರಾಶಿಯ ರೀತಿ ಹಾಕಿರುವ ದೃಶ್ಯ  –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.
ಬೆಂಗಳೂರು ಕೇಂದ್ರ ವಿವಿ ಆವರಣದಲ್ಲಿ ಪುಸ್ತಕಗಳನ್ನು ಕಸದ ರಾಶಿಯ ರೀತಿ ಹಾಕಿರುವ ದೃಶ್ಯ  –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು: ಅವಿಭಜಿತ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಮುದ್ರಿಸಿದ ವಿವಿಧ ಲೇಖಕರ ಸಾವಿರಾರು ಪುಸ್ತಕಗಳು ಬೆಂಗಳೂರು ನಗರ ವಿಶ್ವವಿದ್ಯಾಲಯ ಕಟ್ಟಡದ ಕಾರಿಡಾರ್‌ನಲ್ಲಿ ಗೆದ್ದಲಿಗೆ ಆಹಾರವಾಗುತ್ತಿವೆ.

ಶತಮಾನದಷ್ಟು ಹಳೆಯದಾದ ಸೆಂಟ್ರಲ್‌ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿತ್ತು. ಹೊಸದಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ಈ ಕಾಲೇಜು ಕ್ಯಾಂಪಸ್‌ ಹೊಸ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನವಾಯಿತು.

ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದ ವ್ಯಾಪ್ತಿಯ 44 ಎಕರೆ ಪ್ರದೇಶದಲ್ಲಿ ಹಲವು ಪಾರಂಪರಿಕ ಕಟ್ಟಡಗಳಿವೆ. ವಿಶ್ವವಿದ್ಯಾಲಯದ ಪಾರಂಪರಿಕ ಕಟ್ಟಡಗಳ ನವೀಕರಣ, ನೂತನ ಆಡಳಿತ ಭವನ ನಿರ್ಮಾಣ ಸೇರಿ ₹ 150 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಕಟ್ಟಡಗಳನ್ನು ನವೀಕರಿಸಿ, ಸಂರಕ್ಷಿಸುವ ಕೆಲಸ ನಡೆಯುತ್ತಿದೆ.

ADVERTISEMENT

ಅತ್ತ ಕಟ್ಟಡಗಳ ನವೀಕರಣ ಕಾರ್ಯ ಆರಂಭವಾಗುತ್ತಿದ್ದಂತೆ ಬೆಂಗಳೂರು ವಿಶ್ವವಿದ್ಯಾಲಯ ಹಲವು ದಶಕಗಳು ಮುದ್ರಿಸಿ, ಸಂಗ್ರಹಿಸಿದ್ದ ಭಾರಿ ಸಂಖ್ಯೆಯ ಪುಸ್ತಕಗಳನ್ನು ಕಟ್ಟಡದ ಕಾರಿಡಾರ್‌ನಲ್ಲಿ ರಾಶಿ ಹಾಕಲಾಗಿದೆ. ಬಹಳಷ್ಟು ಗೆದ್ದಲಿಗೆ ಆಹುತಿಯಾಗಿವೆ. ರಾಶಿಯ ಮಧ್ಯೆ ಹೊರಭಾಗಕ್ಕೆ ಚಾಚಿಕೊಂಡಿರುವ ಪುಸ್ತಕಗಳು ಮಳೆಗೆ ಸಿಲುಕಿ ಹಾಳಾಗಿವೆ.

ಗಾಂಧಿ ಅಧ್ಯಯನ ಕೇಂದ್ರ ಮಾಲೆಯ ನಮ್ಮ ಸುತ್ತಣ ಗಾಂಧಿಗಳು, ಬಹುಮುಖಿ ಆವೃತ್ತಿಗಳು, ಚಂಪೂ
ರಾಮಾಯಣ, ಸಂಸ್ಕೃತ ಕಾವ್ಯಗುಚ್ಛ, ವೆಂಕಟಾಧ್ವರಿ ಅವರ ವಿಶ್ವಗುಣಾದರ್ಶ ಚಂಪೂ, ಸಮಕಾಲೀನ ಕನ್ನಡ ಕವಿತೆ, ಎಂ.ವಿ.ಸತ್ಯನಾರಾಯಣ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಂಪಾದಕತ್ವದ ಸಂಗ್ರಹ ಷಟ್ಪದಿ, ವ್ಯಾಸ ಸಂಕಲನ, ಭಾರತೀಯ ತತ್ವಶಾಸ್ತ್ರದ ಇತಿಹಾಸ, ಸಮಕಾಲೀನ ಕನ್ನಡ ಕವಿತೆ, ಆಯ್ದ ಕಥನ ಕವನಗಳು, ಮಣಿ ದರ್ಪಣಂ ಮತ್ತಿತರ ಕೃತಿಗಳು ಬಯಲಿನಲ್ಲಿ ಚೆಲ್ಲಾಪಿಲ್ಲಿಯಾಗಿ
ಬಿದ್ದಿವೆ.

ಕನ್ನಡ ಪುಸ್ತಕಗಳಲ್ಲದೇ ಇಂಗ್ಲಿಷ್‌, ಹಿಂದಿ ಭಾಷೆಯ ಹಲವು ಲೇಖಕರ ಕೃತಿಗಳು, ಬರಹ ಚಟುವಟಿಕೆಗಳ ಪುಸ್ತಕಗಳು, ಚುನಾವಣೆಯ ಕೈಪಿಡಿಗಳು ಸೇರಿ ಸಾವಿರಾರು ಪುಸ್ತಕಗಳ ಬಂಡಲ್‌ಗಳು ರಾಶಿಯ ಮಧ್ಯೆ ಕುಳಿತಿವೆ.

‘ವಿಶ್ವವಿದ್ಯಾಲಯದ ಪ್ರಸಾರಾಂಗ ಹಲವು ದಶಕಗಳಿಂದ ಸಂಗ್ರಹಿಸಿದ್ದ ಪುಸ್ತಕಗಳು ಲೆಕ್ಕವಿಲ್ಲದಷ್ಟಿವೆ. ಕಟ್ಟಡದ ನವೀಕರಣ ಆರಂಭಿಸುವ ಮೊದಲೇ ತೆರವುಗೊಳಿಸುವಂತೆ ಪತ್ರ ಬರೆಯಲಾ
ಗಿತ್ತು. ತೆಗೆದುಕೊಂಡು ಹೋಗುವುದಾಗಿ ಅಲ್ಲಿಂದ ಪ್ರತಿಕ್ರಿಯೆಯೂ ಬಂದಿತ್ತು. ಆದರೆ, ತೆರವುಗೊಳಿಸಿಲ್ಲ. ಅವುಗಳಲ್ಲಿ ಅನುಪಯುಕ್ತ ಪುಸ್ತಕಗಳೇ ಅಧಿಕ ಸಂಖ್ಯೆಯಲ್ಲಿವೆ. ವಾರದ ಒಳಗೆ ತೆಗೆದುಕೊಂಡು ಹೋಗದಿದ್ದರೆ ನಾವೇ ವಿಲೇವಾರಿ ಮಾಡುತ್ತೇವೆ’ ಎನ್ನುತ್ತಾರೆ ವಿಶ್ವವಿದ್ಯಾಲಯದ ಕಲಸಚಿವ ಶ್ರೀಧರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.