ಪೀಣ್ಯ ದಾಸರಹಳ್ಳಿ: ಮಲ್ಲಸಂದ್ರ ಪೈಪ್ ಲೈನ್ ರಸ್ತೆಯ ಉದ್ಯಾನದ ಪಕ್ಕ ಇರುವ ಪಾದಚಾರಿ ಮಾರ್ಗದಲ್ಲಿ ವ್ಯಾಪಾರಿಗಳನ್ನು ತೆರವುಗೊಳಿಸಿ ಕಬ್ಬಿಣದ ಗ್ರಿಲ್ ಹಾಕಿದ್ದರೂ ಪ್ರಯೋಜನವಾಗಿಲ್ಲ.
ವಿರೋಧದ ನಡುವೆಯೂ ಪಾದಚಾರಿ ಮಾರ್ಗದಲ್ಲಿ ನಿತ್ಯ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಅಗತ್ಯ ವಸ್ತುಗಳನ್ನು ಖರೀದಿಸುವ ಸಲುವಾಗಿ ರಸ್ತೆಗಳಲ್ಲಿ ಸಾರ್ವಜನಿಕರು ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸುವ ಕಾರಣ ಬೆಳಿಗ್ಗೆ ಮತ್ತು ಸಂಜೆ ಜನ ಹಾಗೂ ವಾಹನ ದಟ್ಟಣೆ ಉಂಟಾಗುತ್ತಿದೆ.
ಎರಡು ರಸ್ತೆಗಳ ಮಧ್ಯೆ ಉದ್ಯಾನ ಇದೆ. ಚಿಕ್ಕಬಾಣಾವರ ಕಡೆಯಿಂದ ಸವಾರರು ನಗರದ ಕಡೆಗೆ ಪೈಪ್‌ಲೈನ್ ರಸ್ತೆ ಮೂಲಕ ಹೋಗುತ್ತಾರೆ. ಅದೇ ರೀತಿ ನಗರದ ಕಡೆಯಿಂದ ಬರುವ ವಾಹನ ಸವಾರರು ಪೈಪ್‌ಲೈನ್ ರಸ್ತೆ ಮೂಲಕ ಸಾಗಬೇಕು. ಕಿರಿದಾದ ಪೈಪ್‌ಲೈನ್ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
‘ಬಿಬಿಎಂಪಿ ಅಧಿಕಾರಿಗಳು ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲು ಕ್ರಮವಹಿಸುತ್ತಿಲ್ಲ. ಇದರಿಂದಾಗಿ ನಿತ್ಯ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಲ್ಲಸಂದ್ರ ವೃತ್ತದಿಂದ ಶನಿ ಮಹಾತ್ಮ ದೇವಸ್ಥಾನದ ಕೆಂಪೇಗೌಡ ವೃತ್ತದವರೆಗೂ ನೂರಾರು ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಾರ್ವಜನಿಕರಿಂದ ದೂರುಗಳು ಬಂದ ಕಾರಣ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ, ಕಬ್ಬಿಣದ ಗ್ರಿಲ್ ಅಳವಡಿಸಲಾಗುತ್ತಿದೆ. ವಾಹನ ಸವಾರರ ಅನುಕೂಲಕ್ಕಾಗಿ ಮತ್ತು ಪಾದಾಚಾರಿಗಳು ಫುಟ್‌ಪಾತ್ ಮೇಲೆ ಸರಾಗವಾಗಿ ಓಡಾಡಲು ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಶಾಸಕ ಎಸ್. ಮುನಿರಾಜು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.