ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ವಕೀಲರ ಪಾಲಿಗೆ ಕರಿ ಕೋಟು ವಜ್ರ ಇದ್ದಂತೆ. ಕೋರ್ಟ್‌ಗಳು ನ್ಯಾಯ ದೇಗುಲಗಳಿದ್ದಂತೆ. ಪ್ರತಿಯೊಬ್ಬ ವಕೀಲರೂ ವೃತ್ತಿಯನ್ನು ಹೃದಯ ಮತ್ತು ಆತ್ಮದ ಬೆಸುಗೆಯಾಗಿಸಿ ಸತತ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಸೋಮಶೇಖರ್ ಹೇಳಿದರು.
ಹೈಕೋರ್ಟ್‌ನ ವಕೀಲರ ಸಭಾಂಗಣದಲ್ಲಿ ‘ಬೆಂಗಳೂರು ವಕೀಲರ ಸಂಘ’ದ ವತಿಯಿಂದ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಕರ್ನಾಟಕ ಹೈಕೋರ್ಟ್, ರಾಷ್ಟ್ರದಲ್ಲೇ ಪ್ರತಿಷ್ಠಿತ ಹೈಕೋರ್ಟ್ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿನ ವಕೀಲರ ಬದ್ಧತೆಗೆ ಇತಿಹಾಸವೇ ಇದೆ. ಇಲ್ಲಿ ಸಾಕಷ್ಟು ತತ್ವಬದ್ಧ ವಕೀಲರಿದ್ದಾರೆ. ವಕೀಲ ವೃಂದ ಈ ನೆಲದ ಕಾನೂನು ಎತ್ತಿ ಹಿಡಿಯಲು ಸದಾ ಶ್ರಮಿಸಬೇಕು’ ಎಂದರು.
‘ನೀವೆಲ್ಲಾ ನನ್ನನ್ನು ಸಪ್ತ ಮಾತೃಕೆಯ ದೇವತೆಗಳ ನಾಡಿನಿಂದ ಸಪ್ತ ಸಹೋದರಿಯರ ರಾಜ್ಯಕ್ಕೆ ಕಳುಹಿಸಿದ್ದೀರಿ. ಮಣಿಪುರ ಮಹಿಳಾ ಪ್ರಧಾನ ರಾಜ್ಯ. ಇದು ಮಹಾಭಾರತ ಆರಂಭವಾದ ನೆಲೆ. ಬಬ್ರುವಾಹನನ ಸ್ಥಳ. ಚಾಮರಾಜನಗರದ ಯಳಂದೂರಿನ ಗ್ರಾಮದಿಂದ ದೂರದ ರಾಜ್ಯವೊಂದರಲ್ಲಿ ನಾನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಪಯಣದ ಹಿಂದೆ ನಿಮ್ಮ ಪ್ರೀತಿಯೂ ಕಾರಣವಾಗಿದೆ’ ಎಂದು ಬಣ್ಣಿಸಿದರು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್, ‘ಸೋಮಶೇಖರ್ ಜಿಲ್ಲಾ ನ್ಯಾಯಾಧೀಶರಾಗಿ, ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ನ್ಯಾಯಾಂಗ ಕ್ಷೇತ್ರದ ಅಭಿವೃದ್ಧಿಗೆ ಅವರು ಇನ್ನಷ್ಟು ಶ್ರಮಿಸಲಿ’ ಎಂದು ಆಶಿಸಿದರು.
ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಮಾತನಾಡಿ, ‘ನ್ಯಾ.ಸೋಮಶೇಖರ್ ಅವರು ಸದಾ ಸಂವಿಧಾನವನ್ನು ಜಪಿಸುವ ನ್ಯಾಯಮೂರ್ತಿಗಳು. ಶಾಂತಿಯಿಂದ, ತಾಳ್ಮೆಯಿಂದ ಮುನ್ನಡೆದರೆ ಗುರಿ ಮುಟ್ಟುತ್ತಾರೆ ಎಂಬುದಕ್ಕೆ ಅವರೊಂದು ಉತ್ತಮ ಉದಾಹರಣೆ. ಅವರು ಸುಪ್ರೀಂ ಕೋರ್ಟ್‌ಗೂ ಪದನ್ನೋತಿ ಹೊಂದಲಿ’ ಎಂದು ಹಾರೈಸಿದರು.
ನ್ಯಾಯಮೂರ್ತಿ ಅನು ಶಿವರಾಮನ್, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಖಜಾಂಚಿ ಶ್ವೇತಾ ರವಿಶಂಕರ್, ಹೈಕೋರ್ಟ್ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.