ಬೆಂಗಳೂರು: ವಿವಿಧ ದೇಶಗಳ ರಾಯಭಾರ ಕಚೇರಿ ಅಧಿಕಾರಿಗಳ ಜತೆಗೆ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಗುರುವಾರ ಸಭೆ ನಡೆಸಿದರು.
ಸಭೆಯಲ್ಲಿ ಜರ್ಮನಿ, ಆಸ್ಟ್ರೇಲಿಯಾ, ಫ್ರಾನ್ಸ್, ಜಪಾನ್, ಇಸ್ರೇಲ್, ಅಮೆರಿಕ ಸೇರಿ 12 ದೇಶಗಳ ರಾಯಭಾರ ಕಚೇರಿ ಅಧಿಕಾರಿಗಳು ಭಾಗಿಯಾಗಿದ್ದರು. ರಾಯಭಾರ ಕಚೇರಿಗಳಿಗೆ ಬಾಂಬ್ ಬೆದರಿಕೆ, ಆ ಕಚೇರಿಗಳ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಜೆಗಳ ಭದ್ರತೆ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.
ವೀಸಾ ಪಡೆದು ವಿದೇಶಿ ಪ್ರಜೆಗಳು ನಗರಕ್ಕೆ ಬರುತ್ತಿದ್ದಾರೆ. ಅವರು ಎಲ್ಲಿ ವಾಸವಾಗಿದ್ದಾರೆ? ಅವರ ಕೆಲಸಗಳೇನು? ಇತರೆ ಮಾಹಿತಿಗಳು ಸಿಗುತ್ತಿಲ್ಲ. ತಮ್ಮ ದೇಶಗಳಿಂದ ಬೆಂಗಳೂರಿಗೆ ಬರುವ ವ್ಯಕ್ತಿಗಳು ಮತ್ತು ರಾಯಭಾರ ಕಚೇರಿಯ ಅಧಿಕಾರಿ, ಸಿಬ್ಬಂದಿ ವಿವರ, ಕಚೇರಿ ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಇತರೆ ಮಾಹಿತಿಯನ್ನು ನಗರದ ಗುಪ್ತಚರ ವಿಭಾಗ, ಕಮಾಂಡ್ ಸೆಂಟರ್ ಡಿಸಿಪಿಗಳಿಗೆ ನೀಡಬೇಕು ಎಂದು ಸೀಮಾಂತ್ ಕುಮಾರ್ ಸಿಂಗ್ ಸೂಚನೆ ನೀಡಿದರು.
ಡ್ರಗ್ಸ್ ಮಾರಾಟದಲ್ಲಿ ವಿದೇಶಿ ಪ್ರಜೆಗಳು ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿ ವೀಸಾ, ವ್ಯಾಪಾರ- ವ್ಯವಹಾರ, ಮೆಡಿಕಲ್, ಪ್ರವಾಸಿ ವೀಸಾದೊಂದಿಗೆ ನಗರಕ್ಕೆ ಬಂದು ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗುತ್ತಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ತಮ್ಮ ದೇಶದ ಪ್ರಜೆಗಳು ವಾಸವಿದ್ದರೂ ಅವರ ಮಾಹಿತಿಯನ್ನು ನೀಡಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಹಾಗೂ ವಿದೇಶಿ ಪ್ರಜೆಗಳಿಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸರಿಗೆ ಅನುಕೂಲವಾಗುತ್ತದೆ ಎಂದು ಕಮಿಷನರ್ ಹೇಳಿದರು.
ಇತ್ತೀಚೆಗೆ ಆಸ್ಟ್ರೇಲಿಯಾದ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.