ADVERTISEMENT

ಜಾಗತಿಕ ಸಂಬಂಧಗಳಿಗೆ ಬಲ: ನಿರಂಜನ  

ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷಾ ಕೇಂದ್ರದ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 15:32 IST
Last Updated 29 ಜುಲೈ 2025, 15:32 IST
   

ಬೆಂಗಳೂರು: ‘ವಿದೇಶಿ ಭಾಷೆಗಳ ಅಧ್ಯಯನದಿಂದ ಅಂತರರಾಷ್ಟ್ರೀಯ ಸಂಬಂಧಗಳು ಬಲಗೊಳ್ಳುವುದರ ಜೊತೆಗೆ, ಜಾಗತಿಕ ವ್ಯಾಪಾರ ಹಾಗೂ ವ್ಯವಹಾರವೂ ಸುಗಮಗೊಳ್ಳುತ್ತದೆ’ ಎಂದು ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಪ್ರತಿಪಾದಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ(ಬಿಸಿಯು) ಜಾಗತಿಕ ಭಾಷಾ ಕೇಂದ್ರದ 40ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ‘ವಿದೇಶಿ ಭಾಷಾ ಕಲಿಕೆಯಲ್ಲಿ ನವೀನ ಬೋಧನಾ ವಿಧಾನಗಳು’ ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಾಗತಿಕರಣದ ಯುಗದಲ್ಲಿ ಅಂತರಶಿಸ್ತೀಯ ಮತ್ತು ಬಹುಶಿಸ್ತೀಯ ಶಿಕ್ಷಣ ಕಲಿಕೆಯು ಅಗತ್ಯವಾಗಿದೆ’ ಎಂದು ತಿಳಿಸಿದರು.

ADVERTISEMENT

ಬಿಸಿಯು ವಿಶ್ರಾಂತ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಮಾತನಾಡಿ, ‘ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ವಿದೇಶಿ ಭಾಷಾ ಕೋರ್ಸ್‌ಗಳನ್ನು ಆರಂಭಿಸುವುದು ಸವಾಲಿನ ಕೆಲಸ. ಬಿಸಿಯು ಅದನ್ನು ಯಶಸ್ವಿಯಾಗಿ ಸಾಕಾರಗೊಳಿಸಿದೆ’ ಎಂದು ಶ್ಲಾಘಿಸಿದರು.

‘ಐಚ್ಛಿಕ ಇಂಗ್ಲಿಷ್, ಫ್ರೆಂಚ್ ಮತ್ತು ಪತ್ರಿಕೋದ್ಯಮ ವಿಷಯಗಳೊಂದಿಗೆ ಹೊಸ ಪದವಿ ಕೋರ್ಸ್ ಪ್ರಾರಂಭಿಸುತ್ತಿರುವುದರಿಂದ, ವಿದ್ಯಾರ್ಥಿಗಳ ಕಲಿಕೆಗೆ ಹೊಸ ಅವಕಾಶ ಸಿಕ್ಕಂತಾಗಿದೆ’ ಎಂದು ಅವರು ಹೇಳಿದರು.

ಜಾಗತಿಕ ಭಾಷಾ ಕೇಂದ್ರದ ನಿರ್ದೇಶಕಿ ಜ್ಯೋತಿ ವೆಂಕಟೇಶ್ ಅವರು ಐಚ್ಛಿಕ ಇಂಗ್ಲಿಷ್, ಫ್ರೆಂಚ್ ಮತ್ತು ಪತ್ರಿಕೋದ್ಯಮ ವಿಷಯಗಳನ್ನೊಳಗೊಂಡ ಹೊಸ ಪದವಿ ಕೋರ್ಸ್‌ ಪ್ರಾರಂಭವಾಗುತ್ತಿರುವುದನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆಗಳ ಹೊಸ ಪಠ್ಯಪುಸ್ತಕಗಳನ್ನು ಜನಾರ್ಪಣೆಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಸಿಯು ಹಂಗಾಮಿ ಕುಲಪತಿ ಪ್ರೊ. ಕೆ.ಆರ್‌. ಜಲಜಾ, ಕುಲಸಚಿವ ಪ್ರೊ. ರಮೇಶ್ ಮತ್ತು ಹಣಕಾಸು ಅಧಿಕಾರಿ ವಿಜಯಲಕ್ಷ್ಮಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.