ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ನಗರದಲ್ಲಿ ಅಕ್ರಮವಾಗಿ ನೆಲಸಿದ್ದ 9 ವಿದೇಶಿಯರನ್ನು ಬಂಧಿಸಿದ್ದಾರೆ.
ನೈಜೀರಿಯಾದ ನಾಲ್ವರು ಪ್ರಜೆಗಳು, ಘಾನಾದ ಇಬ್ಬರು, ಸುಡಾನ್ ದೇಶದ ಒಬ್ಬ ಪ್ರಜೆ ಸೇರಿ ಒಟ್ಟು ಒಂಬತ್ತು ವಿದೇಶಿಯರನ್ನು ಬಂಧಿಸಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ವಾಸವಾಗಿದ್ದರು. ಬಂಧಿತರನ್ನು ವಲಸಿಗರ ಕೇಂದ್ರದಲ್ಲಿ ಇರಿಸಲಾಗಿದ್ದು, ಈ ಪೈಕಿ ನೈಜೀರಿಯಾ ಪ್ರಜೆಯನ್ನು ಅವರ ದೇಶಕ್ಕೆ ಕಳುಹಿಸಲಾಗಿದೆ. ಉಳಿದವರನ್ನು ಅವರ ದೇಶಕ್ಕೆ ವಾಪಸ್ ಕಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೇ ವಾಸವಾಗಿದ್ದುಕೊಂಡು, ಡ್ರಗ್ಸ್ ಪೆಡ್ಲಿಂಗ್ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ವಿದೇಶಿ ಪ್ರಜೆಗಳ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ನಗರ ಪೊಲೀಸ್ ಘಟಕದ ನೇತೃತ್ವದಲ್ಲಿ ಎನ್‌ಸಿಬಿ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ), ಸಾಮಾಜಿಕ ಶಿಕ್ಷಣ ಇಲಾಖೆ, ಕಾನೂನು ಮತ್ತು ಅಭಿಯೋಗ ಇಲಾಖೆ, ಶಿಕ್ಷಣ, ಕಂದಾಯ, ಆರೋಗ್ಯ, ಸಮಾಜ ಕಲ್ಯಾಣ, ವಾಣಿಜ್ಯ ತೆರಿಗೆ, ಬಿಬಿಎಂಪಿ, ಕೃಷಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಸಭೆ ಆಯೋಜಿಸಿ ಮಾದಕ ವಸ್ತುಗಳ ಜಾಲದ ಕುರಿತು ವಿವಿಧ ಇಲಾಖೆಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.
ಈ ಮಾಹಿತಿ ಆಧರಿಸಿ ಮಾದಕ ವಸ್ತುಗಳ ಪತ್ತೆ, ವೀಸಾ ಅವಧಿ ಮೀರಿದ ವಿದೇಶಿಯರನ್ನು ಗಡಿಪಾರು ಮಾಡುವ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ .
ಡ್ರಗ್ಸ್ ಪತ್ತೆ: ವಿದೇಶಗಳಿಂದ ಅಂಚೆ ಮೂಲಕ ಆಮದು ಮಾಡಿಕೊಂಡಿದ್ದ ₹6 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 10 ಗ್ರಾಂ ಕೊಕೇನ್, 10 ಎಂಡಿಎಂಎ ಕ್ರಿಸ್ಟೆಲ್, 30 ಗ್ರಾಂ ಎಕ್ಸ್‌ಟಸಿ ಪಿಲ್ಸ್, 70 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಪಾರ್ಸೆಲ್ ಬುಕ್ ಮಾಡಿದ್ದ ವ್ಯಕ್ತಿಗಳ ಬಗ್ಗೆ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.