
ಬೆಂಗಳೂರು: ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡಿದ ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದ ಮನೆ ಮಾಲೀಕರೊಬ್ಬರ ವಿರುದ್ಧ ವೈಟ್‌ಫೀಲ್ಡ್ ಠಾಣೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ನಾಗೊಂಡನಹಳ್ಳಿ ನಿವಾಸಿ ರಾಘವೇಂದ್ರ ಎಂಬುವರ ವಿರುದ್ಧ ವಲಸೆ ಮತ್ತು ವಿದೇಶಿಯರ ಕಾಯ್ದೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡದೆ ವಂಚಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ರಾಘವೇಂದ್ರ ಅವರು ತಮ್ಮ ಮನೆಯನ್ನು ಆಫ್ರಿಕಾದ ಇಬ್ಬರು ಮಹಿಳೆಯರಿಗೆ ಬಾಡಿಗೆಗೆ ನೀಡಿದ್ದರು. ಆದರೆ, ಕಾನೂನಿನ ಪ್ರಕಾರ ಸ್ಥಳೀಯ ಪೊಲೀಸ್ ಠಾಣೆ ಹಾಗೂ ವಿದೇಶಿಯರ ಪ್ರಾದೇಶಿಕ ನೋಂದಣಿ ಪ್ರಾಧಿಕಾರಕ್ಕೆ (ಎಫ್‌ಆರ್‌ಆರ್‌ಒ) ‘ಸಿ’ ಫಾರ್ಮ್ ಅನ್ವಯ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ದೇಶದ ಯಾವುದೇ ಭಾಗದಲ್ಲಿ ವಿದೇಶಿಯರು ವಾಸಿಸುತ್ತಿದ್ದರೂ ಎಫ್‌ಆರ್‌ಆರ್‌ಒ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ವಾಸಿಸುತ್ತಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.