ADVERTISEMENT

ವಿದೇಶಿ ಮಹಿಳೆ ಹತ್ಯೆ: ಹೋಟೆಲ್‌ ಕೆಲಸಗಾರರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 23:54 IST
Last Updated 15 ಮಾರ್ಚ್ 2024, 23:54 IST
ಅಮ್ರಿತ್
ಅಮ್ರಿತ್   

ಬೆಂಗಳೂರು: ಪಂಚತಾರಾ ಹೋಟೆಲ್‌ವೊಂದರ ಕೊಠಡಿಯಲ್ಲಿ ಉಳಿದುಕೊಂಡಿದ್ದ ವಿದೇಶಿ ಮಹಿಳೆ ಜರೀನಾ ಅವರನ್ನು ಕೊಲೆ ಮಾಡಿದ್ದ ಆರೋಪದಡಿ, ಅದೇ ಹೋಟೆಲ್‌ನ ಇಬ್ಬರು ಕೆಲಸಗಾರರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅಸ್ಸಾಂ ರಾಜ್ಯದ ಚರೈಡಿಯೊ ಜಿಲ್ಲೆಯ ರಾಬರ್ಟ್ ಹಾಗೂ ಅಮ್ರಿತ್ ಬಂಧಿತರು. ಮಹಿಳೆ ಬಳಿಯ ವಸ್ತುಗಳು ಹಾಗೂ ನಗದು ದೋಚುವ ಉದ್ದೇಶದಿಂದ ಮಾರ್ಚ್ 13ರಂದು ತಡರಾತ್ರಿ ಜರೀನಾ ಅವರನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು’ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದರು.

‘ಕೃತ್ಯದ ನಂತರ ಆರೋಪಿಗಳು ಕೇರಳಕ್ಕೆ ಹೋಗಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕೇರಳಕ್ಕೆ ಹೋಗಿದ್ದ ವಿಶೇಷ ತಂಡ, ಆರೋಪಿಗಳನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇವರಿಂದ ₹13,000 ನಗದು, ₹2,000 ಮುಖಬೆಲೆಯ ಹಾಗೂ ₹5,000 ಉಜ್ಬೇಕಿಸ್ತಾನ್‌ದ 3 ನೋಟುಗಳು, ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಉಸಿರುಗಟ್ಟಿಸಿ ಹತ್ಯೆ: ‘ಜರೀನಾ ಅವರು ಪ್ರವಾಸಕ್ಕೆಂದು ಮಾರ್ಚ್ 5ರಂದು ನಗರಕ್ಕೆ ಬಂದಿದ್ದರು. ಆನ್‌ಲೈನ್‌ ಮೂಲಕ ಕೊಠಡಿ ಕಾಯ್ದಿರಿಸಿ ಉಳಿದುಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳಾದ ರಾಬರ್ಟ್ ಹಾಗೂ ಅಮ್ರಿತ್, ಹೋಟೆಲ್‌ನಲ್ಲಿ ಸ್ವಚ್ಛತೆ ಕೆಲಸ ಮಾಡಿಕೊಂಡಿದ್ದರು. ಮಹಿಳೆಯನ್ನು ಆಗಾಗ ಮಾತನಾಡಿಸುತ್ತಿದ್ದರು. ಮಹಿಳೆ ಬಳಿ ಸಾಕಷ್ಟು ಹಣ ಹಾಗೂ ಆಭರಣ ಇರಬಹುದೆಂದು ತಿಳಿದಿದ್ದರು’ ಎಂದರು.

‘ಮಾರ್ಚ್ 13ರಂದು ರಾತ್ರಿ ಕೊಠಡಿಗೆ ನುಗ್ಗಿದ್ದ ಆರೋಪಿಗಳು, ಮಹಿಳೆ ಬಳಿಯ ನಗದು ಹಾಗೂ ಇತರೆ ವಸ್ತುಗಳನ್ನು ಕಸಿದುಕೊಳ್ಳಲು ಮುಂದಾಗಿದ್ದರು. ಇದಕ್ಕೆ ಮಹಿಳೆ ವಿರೋಧಿಸಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು, ಮಹಿಳೆಯನ್ನು ಉಸಿರುಗಟ್ಟಿಸಿ ಕೊಂದಿದ್ದರು. ನಂತರ, ಬಾಗಿಲು ಹೊರಗಿನಿಂದ ಲಾಕ್‌ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಹಲವು ಗಂಟೆಯಾದರೂ ಜರೀನಾ ಅವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಹೋಟೆಲ್‌ನ ವ್ಯವಸ್ಥಾಪಕ, ಕೊಠಡಿ ಬಾಗಿಲು ತೆರೆದು ನೋಡಿದಾಗ ಮೃತದೇಹ ಕಂಡಿತ್ತು. ಅವರೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

‘ಮಹಿಳೆ ಒಬ್ಬರೇ ಕೊಠಡಿಯಲ್ಲಿದ್ದರು. ಅವರನ್ನು ಭೇಟಿಯಾಗಲು ಯಾರೊಬ್ಬರೂ ಹೋಟೆಲ್‌ಗೆ ಬಂದಿರಲಿಲ್ಲ. ಹೀಗಾಗಿ, ಹೋಟೆಲ್ ಸಿಬ್ಬಂದಿ ಮೇಲೆಯೇ ಅನುಮಾನ ಬಂದಿತ್ತು. ಆರೋಪಿಗಳಾದ ರಾಬರ್ಟ್ ಹಾಗೂ ಅಮ್ರಿತ್ ಸಹ ನಾಪತ್ತೆಯಾಗಿದ್ದರು. ಇವರೇ ಆರೋಪಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿತ್ತು’ ಎಂದರು.

ರಾಬರ್ಟ್
‘ಕೆಲಸಗಾರರ ಹಿನ್ನೆಲೆ ಪರಿಶೀಲನೆಗೆ ಸೂಚನೆ’
‘ಆರೋಪಿಗಳಾದ ರಾಬರ್ಟ್ ಹಾಗೂ ಅಮ್ರಿತ್ ಹಲವು ತಿಂಗಳಿನಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಅಪರಾಧ ಹಿನ್ನೆಲೆಯುಳ್ಳವರೆಂಬ ಮಾಹಿತಿ ಇದ್ದು ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ‘ಹೋಟೆಲ್ ಕಚೇರಿ ಹಾಗೂ ಇತರೆ ಕಡೆಗಳಲ್ಲಿ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಹಿನ್ನೆಲೆ ಪರಿಶೀಲಿಸಬೇಕು. ಕೆಲಸಗಾರರಿಂದ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯಗೊಳಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಠಾಣೆಗಳಿಗೆ ಮಾಹಿತಿ ನೀಡಬೇಕು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.