ADVERTISEMENT

ಬೆಂಗಳೂರು ಮೆಟ್ರೊದಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ ಯುಟ್ಯೂಬರ್: ವ್ಯಾಪಕ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2023, 10:01 IST
Last Updated 25 ಸೆಪ್ಟೆಂಬರ್ 2023, 10:01 IST
   

ಬೆಂಗಳೂರು: ಬೆಂಗಳೂರು ಮೆಟ್ರೊದಲ್ಲಿ ಟಿಕೆಟ್‌ ಇಲ್ಲದೆ ಹೇಗೆ ಪ್ರಯಾಣಿಸಬಹುದು ಎನ್ನುವ ಬಗ್ಗೆ ವಿದೇಶಿ ಯುಟ್ಯೂಬರ್‌ ಒಬ್ಬರು ವಿಡಿಯೊ ಮಾಡಿ ಹಂಚಿಕೊಂಡಿದ್ದು, ವ್ಯಾಪಕ ಟೀಕೆಗೆ ಒಳಗಾಗಿದೆ.

ಸೈಪ್ರಸ್ ದೇಶದ ಯುಟ್ಯೂಬರ್‌ ಫಿಡಿಯಾಸ್ ಪನಾಯೊಟೌ ಬೆಂಗಳೂರಿನ ಗ್ರೀನ್‌ ಲೈನ್‌ ಮೆಟ್ರೊದಲ್ಲಿ ಟಿಕೆಟ್‌ ಪಡೆಯದೆ ಗೇಟ್‌ ದಾಟಿ ಪ್ರಯಾಣಿಸಿ, ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ವಿಡಿಯೊದಲ್ಲಿ, ‘ಭಾರತೀಯ ಮೆಟ್ರೊದಲ್ಲಿ ಹೇಗೆ ನುಸುಳಬಹುದು ಎನ್ನುವ ಮೂಲಕ ಆರಂಭಿಸಿ, ಮೆಟ್ರೊ ನಿಲ್ದಾಣದಲ್ಲಿದ್ದ ಇಬ್ಬರು ಪ್ರಯಾಣಿಕರ ಬಳಿ ಟಿಕೆಟ್‌ ಇಲ್ಲದೆ ಪ್ರಯಾಣಿಸಲು ಸಾಧ್ಯವೆ? ಎಂದು ಕೇಳಿದ್ದಾರೆ, ಅದಕ್ಕೆ ಉತ್ತರವಾಗಿ ಪ್ರಯಾಣಿಕರು, ಬಹುಷಃ ಸಾಧ್ಯವಿಲ್ಲ ಎಂದಿದ್ದಾರೆ, ಆಗ ಫಿಡಿಯಾಸ್ ನಾನು ಸಾಧ್ಯವಾಗಿಸುತ್ತೇನೆ ಎಂದು ಗೇಟ್‌ ಹಾರಿದ್ದಾರೆ, ನಂತರ ಹೊರಗೆ ಹೇಗೆ ಹೋಗುತ್ತೀರಿ ಎಂದು ಕೇಳಿದಾಗ ಅದು ಸರಿ, ಎಂದ ಫಿಡಿಯಾಸ್‌ ಒಳಗೆ ಬಂದಂತೆ ಗೇಟ್‌ ದಾಟಿ ಹೊರಬಂದಿದ್ದಾರೆ. ಮೆಟ್ರೊ ರೈಲಿನ ಒಳಗೆ ಕೂಡ ಪುಲ್‌ಅಪ್‌ ಮಾಡಿ, ಅಲ್ಲಿರುವ ಜನರೊಂದಿಗೆ ಮಾತನಾಡಿದ್ದಾರೆ.

ADVERTISEMENT

ಎರಡು ದಿನಗಳ ಹಿಂದೆ ಫಿಡಿಯಾಸ್ ಈ ವಿಡಿಯೊ ಪೋಸ್ಟ್‌ ಮಾಡಿದ್ದು 1.1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ. 

ಪ್ರಯಾಣದ ವೇಳೆ  ಫಿಡಿಯಾಸ್ ನೀಲಿ ಶಾರ್ಟ್‌, ಬಿಳಿ ಟೀ ಶರ್ಟ್‌ ಧರಿಸಿದ್ದಾರೆ. ಟಿಕೆಟ್ ಇಲ್ಲದೇ ಕೌಂಟರ್ ದಾಟಿ ಬರುವ ಇವರು ವಿಡಿಯೋದಲ್ಲಿ ಮಾತನಾಡಿಕೊಂಡೆ ಮೆಟ್ರೊ ನಿಲ್ದಾಣದಿಂದ ಹೊರ ಬಂದಿದ್ದಾರೆ.

ಯೂಟ್ಯೂಬ್ ಚಾನೆಲ್‌ಗೆ 2.26 ಮಿಲಿಯನ್ ಚಂದಾದಾರರನ್ನು ಹೊಂದಿರುವ ಫಿಡಿಯಾಸ್‌ ಈ ಹಿಂದೆ ಬಿಲಿಯನೇರ್ ಎಲೋನ್ ಮಸ್ಕ್ (Ellon Musk) ಅವರನ್ನು ಅಪ್ಪಿ ಸುದ್ದಿಯಾಗಿದ್ದರು.

ಮೆಟ್ರೊದಲ್ಲಿ ನಿಯಮ ಉಲ್ಲಂಘನೆ ಮಾಡಿ ಫಿಡಿಯಾಸ್ ಪನಾಯೊಟೌ ಎಲ್ಲೆಲ್ಲಿ ಸಂಚರಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಿ ಮೆಟ್ರೊ ಭದ್ರತಾ ವಿಭಾಗದವರು ಕ್ರಮ ಕೈಗೊಳ್ಳಲಿದ್ದಾರೆ.
ಯಶವಂತ್‌ ಚವಾಣ್‌, ಸಾರ್ವಜನಿಕ ಸಂಪರ್ಕಾಧಿಕಾರಿ BMRCL ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.