ADVERTISEMENT

ಅರಣ್ಯ ಸಂರಕ್ಷಣೆಗೆ ಸಹಾಯ ಮಾಡಿ: ಸಚಿವ ಈಶ್ವರ ಖಂಡ್ರೆ

‘ಆಮ್ಲಜನಕದ ಮಹತ್ವ ತಿಳಿದದ್ದು ಕೋವಿಡ್‌ ಕಾಲದಲ್ಲಿ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 15:54 IST
Last Updated 30 ಅಕ್ಟೋಬರ್ 2025, 15:54 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ‘ಸ್ವಚ್ಛ ಗಾಳಿ ನೀಡುವ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಯಲು ಅವಕಾಶ ಕೊಡಬೇಡಿ. ವೃಕ್ಷ ಸಂರಕ್ಷಣೆ ಹಾಗೂ ಸಂವರ್ಧನೆಗೆ ನಿಮ್ಮ ಕೈಯಲ್ಲಿ ಆದ ಸಹಾಯ ಮಾಡಿ‘ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಪರಮೇಶ್ವರಪ್ಪ ಅವರ ‘ಆಳ ಬೇರು ಮರ ಅಮರ ನಿಸರ್ಗದ ವರ’ ಆತ್ಮಕಥೆಯನ್ನು ಗುರುವಾರ ಇಲ್ಲಿ ಜನಾರ್ಪಣೆ ಮಾಡಿ ಮಾತನಾಡಿದರು.

‘ಆಮ್ಲಜನಕ ಪ್ರತಿಯೊಬ್ಬರ ಬದುಕಿಗೆ ಬೇಕೇ ಬೇಕು. ಅದರ ಮಹತ್ವ ತಿಳಿದಿದ್ದು ಕೋವಿಡ್ ಕಾಲದಲ್ಲಿ. ಸಕಾಲಕ್ಕೆ ಆಮ್ಲಜನಕ ದೊರಕದೇ ಲಕ್ಷಾಂತರ ಮಂದಿ ಸಾವಿಗೀಡಾದರು. ಮರಗಳು ಪ್ರಾಕೃತಿಕವಾಗಿಯೇ ನಿತ್ಯ ಆಮ್ಲಜನಕ ನೀಡುವುದರಿಂದ ವೃಕ್ಷಗಳಿಗೆ ಸದಾ ಕೃತಜ್ಞರಾಗಿರಬೇಕು’ ಎಂದು ತಿಳಿಸಿದರು.

ADVERTISEMENT

‘ಅಮೆಜಾನ್ ಮಳೆ ಕಾಡುಗಳನ್ನು ಆಮ್ಲಜನಕದ ಕಣಜ ಎಂದು ಕರೆಯುತ್ತಾರೆ. ಜಗತ್ತಿನ ಶೇ 20ರಷ್ಟು ಆಮ್ಲಜನಕವನ್ನು ಅಮೆಜಾನ್‌ ಕಾಡುಗಳು ಪೂರೈಸುತ್ತವೆ. ನಿತ್ಯಹರಿದ್ವರ್ಣದ ಕಾಡುಗಳು, ಪಶ್ಚಿಮ ಘಟ್ಟಗಳೂ ಆಮ್ಲಜನಕದ ಆಗರವಾಗಿರುವುದರಿಂದ ಮುಂದಿನ ಪೀಳಿಗೆಗಳಿಗೆ ಇವುಗಳನ್ನು ಸಂರಕ್ಷಿಸಬೇಕು’ ಎಂದು ಹೇಳಿದರು.

‘ಮಾನವ -ವನ್ಯಜೀವಿ ಸಂಘರ್ಷ ಇಂದಿನ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಸಹಬಾಳ್ವೆಯ ಬಗ್ಗೆ ಜನಜಾಗೃತಿ ಮೂಡಿಸಲೇಬೇಕಿದೆ. ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಅಧಿಕಾರಿಗಳು, ಸಿಬ್ಬಂದಿಯಲ್ಲಿ ತುಡಿತ ಇರಲೇಬೇಕಾಗುತ್ತದೆ. ‍ಎಸ್. ಪರಮೇಶ್ವರಪ್ಪ ಅವರು ಭೌತಿಕವಾಗಿ ನಮ್ಮ ಜತೆಗಿಲ್ಲದೇ ಇದ್ದರೂ ಅವರ ಬದುಕು ಮಾದರಿ’ ಎಂದು ಹೇಳಿದರು.

ಪರಿಸರ ತಜ್ಞರಾದ ಸುರೇಶ್ ಹೆಬ್ಳೀಕರ್, ಉಲ್ಲಾಸ್ ಕಾರಂತ್, ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ನಿವೃತ್ತ ಅಧಿಕಾರಿ ಆರ್.ಎಂ. ಪಾಲಣ್ಣ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.