ADVERTISEMENT

ಸಮಗ್ರ ಕನ್ನಡ ಭಾಷಾ ಕಾಯ್ದೆ ರೂಪಿಸಿ: ಸಂಸದ ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 20:50 IST
Last Updated 6 ಡಿಸೆಂಬರ್ 2020, 20:50 IST
ಹನುಮಂತಯ್ಯ
ಹನುಮಂತಯ್ಯ   

ಬೆಂಗಳೂರು: ‘ಕೇರಳ ಸರ್ಕಾರವು ಸಮಗ್ರ ಮಲಯಾಳ ಭಾಷಾ ಅನುಷ್ಠಾನ ಮತ್ತು ಪ್ರಸಾರ ಕಾಯ್ದೆ ರೂಪಿಸಿದೆ. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ಸಮಗ್ರ ಕನ್ನಡ ಭಾಷಾ ಕಾಯ್ದೆ ರೂಪಿಸುವ ಅಗತ್ಯವಿದೆ’ ಎಂದು ರಾಜ್ಯಸಭಾ ಸದಸ್ಯ, ಸಾಹಿತಿ ಡಾ. ಎಲ್. ಹನುಮಂತಯ್ಯ ಹೇಳಿದರು.

ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ಕಾರ್ಮಿಕ ಲೋಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವನಗುಡಿ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆ ಬಳಿ ಬಯಲು ರಂಗಮಂದಿರವನ್ನು ಬಿಬಿಎಂಪಿ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕೇಂದ್ರ ಲೋಕಸೇವಾ ಆಯೋಗ ನಡೆಸುವ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸಲು ಸಂಸತ್ತಿನಲ್ಲಿ ಒತ್ತಡ ಹೇರಬೇಕು’ ಎಂದು ವ.ಚ. ಚನ್ನೇಗೌಡ ಒತ್ತಾಯಿಸಿದರು.

‘ಕನ್ನಡ-ಕನ್ನಡಿಗ-ಕರ್ನಾಟಕ’ಪುಸ್ತಕದಿಂದ ಬರುವ ಗೌರವಧನದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ, ಸನ್ಮಾನ ಮಾಡಲಾಗುತ್ತಿದೆ’ ಎಂದು ರಾ.ನಂ. ಚಂದ್ರಶೇಖರ ಹೇಳಿದರು.

ಶಂಬಾ ವಿಚಾರ ವೇದಿಕೆಯ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ಅವರಿಗೆ ‘ಕನ್ನಡ ಚಿರಂಜೀವಿ’, ಕನ್ನಡೇತರರ ಪಾಲಿಗೆ ಕನ್ನಡ ‘ಮಹಾಗುರು’ ಎನಿಸಿರುವ ಬಿ.ವಿ. ರಾಘವನ್‌ ಅವರಿಗೆ ‘ಕನ್ನಡ ಅರವಿಂದ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.