ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಆರೋಪದಡಿ ಉತ್ತರಪ್ರದೇಶದ ಶಿವಸೇನೆಯ ಮಾಜಿ ಶಾಸಕ ಭಗವಾನ್ ಶರ್ಮಾ ಅವರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ (ಬಿಐಎಎಲ್) ಪೊಲೀಸರು, ಭಾನುವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಉತ್ತರಪ್ರದೇಶದ 40 ವರ್ಷದ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಮಾಜಿ ಶಾಸಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಸೆಕ್ಷನ್ 69ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಆರೋಪಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿತ್ತು. ವಿಚಾರಣೆಗೆ ಬಂದಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿ ಮಾಜಿ ಶಾಸಕರಿಂದ ಹೇಳಿಕೆ ದಾಖಲಿಸಿಕೊಂಡು ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಮದುವೆ ಆಗುವುದಾಗಿ ನಂಬಿಸಿ ಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್ ಅವರು ತನ್ನನ್ನು ಬೆಂಗಳೂರಿಗೆ ಕರೆತಂದು ದೇವನಹಳ್ಳಿಯ ಹೋಟೆಲ್‌ವೊಂದರಲ್ಲಿ ಅತ್ಯಾಚಾರ ಎಸಗಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಆಗಸ್ಟ್ 14ರಂದು ಉತ್ತರ ಪ್ರದೇಶದಿಂದ ಕರೆದುಕೊಂಡು ಬಂದಿದ್ದರು. ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ಸುತ್ತಾಡಿಸಿದ್ದರು. ನಂತರ, ಹೋಟೆಲ್‌ವೊಂದರಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ವಿಷಯವನ್ನು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.