ADVERTISEMENT

ಕನ್ನಡಿಗರ ಹಿತಾಸಕ್ತಿಯ ನೀತಿ, ಯೋಜನೆ ರೂಪಿಸಿ: ಕನ್ನಡಿಗರ ಆಗ್ರಹ ಸಮಾವೇಶ ಒತ್ತಾಯ

ಕನ್ನಡಿಗರ ಆಗ್ರಹ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 15:49 IST
Last Updated 22 ನವೆಂಬರ್ 2025, 15:49 IST
ಕನ್ನಡ, ಕನ್ನಡಿಗ, ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ಹಕ್ಕೊತ್ತಾಯಗಳನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಕನ್ನಡಿಗರ ಆಗ್ರಹ ಸಮಾವೇಶ ಶನಿವಾರ ನಡೆಯಿತು
ಪ್ರಜಾವಾಣಿ ಚಿತ್ರ
ಕನ್ನಡ, ಕನ್ನಡಿಗ, ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ಹಕ್ಕೊತ್ತಾಯಗಳನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಕನ್ನಡಿಗರ ಆಗ್ರಹ ಸಮಾವೇಶ ಶನಿವಾರ ನಡೆಯಿತು ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡ – ಕರ್ನಾಟಕ ಕೇಂದ್ರಿತವಾದ ಮತ್ತು ಹಿತಾಸಕ್ತಿಗಳಿಗೆ ಪೂರಕವಾದ ನೀತಿ ಮತ್ತು ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬ ಹಕ್ಕೊತ್ತಾಯವನ್ನು ಶನಿವಾರ ನಡೆದ ಕನ್ನಡಿಗರ ಆಗ್ರಹ ಸಮಾವೇಶದಲ್ಲಿ ಮಂಡಿಸಲಾಯಿತು.

‘ದ್ವಿಭಾಷಾ ನೀತಿ'ಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಮಾಡಬೇಕು. ರಾಜ್ಯದ ಎಲ್ಲ ಉದ್ಯಮಗಳಲ್ಲಿ ಶೇ 80 ಉದ್ಯೋಗವನ್ನು ಕನ್ನಡಿಗರಿಗೇ ಮೀಸಲಿಡಲು ‘ಸ್ಥಳೀಯ ಉದ್ಯೋಗ ಖಾತ್ರಿ’ ಕಾಯ್ದೆ ತರಬೇಕು. ಕುವೆಂಪು ಅವರಿಗೆ ಮರಣೋತ್ತರವಾಗಿ ‘ಭಾರತರತ್ನ ಪ್ರಶಸ್ತಿ’ ಘೋಷಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಬೇಕು.

‘ನಮ್ಮ ನೀರು, ನಮ್ಮ ಹಕ್ಕು. ಕಾವೇರಿ, ಕೃಷ್ಣಾ, ಮಹದಾಯಿ ಸೇರಿದಂತೆ ರಾಜ್ಯದ ಪಾಲಿನ ನಮ್ಮ ನ್ಯಾಯಯುತ ಹಕ್ಕಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕಾರ್ಯಯೋಜನೆಗಳನ್ನು ರೂಪಿಸಬೇಕು. ನ್ಯಾಯಾಲಯಗಳಲ್ಲಿರುವ ಜಲವಿವಾದದ ಪ್ರಕರಣಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಿಸಿ ರಾಜ್ಯದ ಹಿತ ಕಾಪಾಡಬೇಕು. ‘ರಾಷ್ಟ್ರೀಯ ಸಮಗ್ರ ಜಲ ನೀತಿ’ಯನ್ನು ರೂಪಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಬೇಕು. ಅಕ್ಕಪಕ್ಕದ ರಾಜ್ಯಗಳ ಮುಖಂಡರೊಂದಿಗೆ ಚರ್ಚಿಸಿ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಒಯ್ಯಬೇಕು.

ADVERTISEMENT

ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗೆ ಹಕ್ಕೊತ್ತಾಯ ಮಂಡಿಸಬೇಕು. ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌) ಸ್ಥಾಪಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರೈಲ್ವೆ, ಬ್ಯಾಂಕು, ರಕ್ಷಣಾ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲ ಉದ್ಯೋಗಗಳಲ್ಲಿ ರಾಜ್ಯವಾರು ಮೀಸಲಾತಿ ನಿಗದಿಪಡಿಸುವುದಕ್ಕಾಗಿ ‘ರಾಷ್ಟ್ರೀಯ ಉದ್ಯೋಗ ನೀತಿ’ ಜಾರಿಗೊಳಿಸಲು ಕೇಂದ್ರವನ್ನು ಆಗ್ರಹಿಸಬೇಕು.

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 3 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗುವುದನ್ನು ಖಾತ್ರಿಪಡಿಸಲು ಅವುಗಳನ್ನು ಉನ್ನತೀಕರಣಗೊಳಿಸಬೇಕು. ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಯಿತು.

ಹೋರಾಟಗಾರರಾದ ಜಾಣಗೆರೆ ವೆಂಕಟರಾಮಯ್ಯ, ರವಿ ಕೃಷ್ಣಾರೆಡ್ಡಿ, ಶಿವರಾಮೇಗೌಡ, ಪ್ರಕಾಶ್ ಮೂರ್ತಿ ಭೀಮಾ ಶಂಕರ ಪಾಟೀಲ, ರವಿ ಶೆಟ್ಟಿ ಬೈಂದೂರು, ಕನ್ನಡ ರಫಿ, ನರಸಿಂಹ, ರೂಪೇಶ್ ರಾಜಣ್ಣ, ಸೋಮಶೇಖರ್, ರಘು ಜಾಣಗೆರೆ, ದೀಪಕ್ ಸಿ.ಎನ್., ಎಲ್. ಜೀವನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.