
ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು
ಬೆಂಗಳೂರು: ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಮತ್ತು ನೂತನ ಶೈಕ್ಷಣಿಕ ಭವನದ ಉದ್ಘಾಟನಾ ಕಾರ್ಯಕ್ರಮ ಬುಧವಾರ ನಡೆಯಿತು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಆರಂಭವಾದ ಸಿಎಂಆರ್ ಶಿಕ್ಷಣ ಸಂಸ್ಥೆ ಇಂದು ಸಮೂಹ ಶಿಕ್ಷಣ ಸಂಸ್ಥೆಗಳಾಗಿ ಹಾಗೂ ವಿಶ್ವವಿದ್ಯಾಲಯವಾಗಿ ಬೆಳೆದು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಮಟ್ಟದ ಉದ್ಯೋಗ ಪಡೆದು ದೇಶ-ವಿದೇಶಗಳಲ್ಲಿ ಸಿಎಂಆರ್ ಶಿಕ್ಷಣ ಸಂಸ್ಥೆಗಳ ಕೀರ್ತಿಯನ್ನು ಬೆಳಗಿಸಿದ್ದಾರೆ’ ಎಂದು ಶ್ಲಾಘಿಸಿದರು.
ಎನ್‍ಪಿಎಸ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಅಧ್ಯಕ್ಷ ಕೆ.ಪಿ. ಗೋಪಾಲಕೃಷ್ಣ ಮಾತನಾಡಿ, ‘ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಮೂಲಕ ಶಿಕ್ಷಣವನ್ನು ಪುನರ್ ರೂಪಿಸಬೇಕು’ ಎಂದು ತಿಳಿಸಿದರು.
ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಸಿಎಂಆರ್ ವಿಶ್ವವಿದ್ಯಾಲಯ ಅಧ್ಯಕ್ಷ ಕೆ.ಸಿ ರಾಮಮೂರ್ತಿ ಮಾತನಾಡಿ, ‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ದೀರ್ಘಾವಧಿ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ’ ಎಂದು ವಿವರಿಸಿದರು.
₹12.82 ಕೋಟಿ ವಿದ್ಯಾರ್ಥಿ ಪ್ರೋತ್ಸಾಹಧನವನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡಲಾಯಿತು. 207 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ, 18 ವಿದ್ಯಾರ್ಥಿಗಳು ಕ್ರೀಡಾ ಪ್ರತಿಭಾ ವೇತನ, 22 ವಿದ್ಯಾರ್ಥಿಗಳು ನಾಯಕತ್ವ ಪ್ರತಿಭಾ ಪುರಸ್ಕಾರ, 2,112 ವಿದ್ಯಾರ್ಥಿಗಳುಶುಲ್ಕ ರಿಯಾಯಿತಿ ಪಡೆದರು.
ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಿ ಹೊನ್ನಪ್ಪ ಗೌಡ, ಸಿಎಂಆರ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಬಿತಾ ರಾಮಮೂರ್ತಿ, ಸಿಎಂಆರ್ ಜ್ಞಾನಧಾರ ಟ್ರಸ್ಟ್ ಕಾರ್ಯದರ್ಶಿ ಕೆ.ಸಿ. ಜಗನ್ನಾಥ ರೆಡ್ಡಿ, ಸಹ ಕುಲಾಧಿಪತಿ ಜಯದೀಪ್ ಕೆ.ಆರ್. ರೆಡ್ಡಿ, ಏಕ್ಯಾ ಸಮೂಹ ಶಾಲೆಗಳ ಸಂಸ್ಥಾಪಕಿ ತ್ರೀಸ್ತಾ ರಾಮಮೂರ್ತಿ, ಕುಲಪತಿ ಎಚ್.ಬಿ.ರಾಘವೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.