ADVERTISEMENT

ಐಎಂಎ ಮಾದರಿ ವಂಚನೆ 9 ಕಂಪನಿಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 18:56 IST
Last Updated 11 ಅಕ್ಟೋಬರ್ 2019, 18:56 IST
   

ಬೆಂಗಳೂರು: ‘ಐಎಂಎ (ಐ ಮಾನಿಟರಿ ಅಡ್ವೈಸರಿ) ಮಾದರಿಯಲ್ಲೇ ಹೂಡಿಕೆದಾರರಿಗೆ ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಒಂಬತ್ತು ಖಾಸಗಿ ಕಂಪನಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತು ನರೇಂದ್ರ ಕುಮಾರ್ ಸೇರಿದಂತೆ 7 ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ‘ಅಕ್ಟೋಬರ್‌ 18ರೊಳಗೆ ವರದಿ ಸಲ್ಲಿಸಿ’ ಎಂದು ಸೂಚಿಸಿತು.

ಪ್ರಕರಣದಲ್ಲಿ ಅ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಅಜ್ಮೇರಾ ಗ್ರೂಪ್, ಇಂಜಾಸ್ ಇಂಟರ್‍ನ್ಯಾಷನಲ್, ಮುಜರಿಬಾ ಬುಲಿಯನ್ ಟ್ರೇಡಿಂಗ್ ಎಲ್‍ಎಲ್‍ಪಿ, ಆಲಾ ವೆಂಚರ್ಸ್, ಐ ಮಾನಿಟರಿ ಅಡ್ವೈಸರಿ, ಬುರ್ರಾಖ್ ಯುನಿಟಿ ಎಲ್‍ಎಲ್‍ಪಿ, ಮೊರ್ಗೆನಾಲ್ ಹಾಗೂ ನಾಫಿಯಾ ಮಾನಿಟರಿ ಅಡ್ವೈಸರಿ ಕಂಪೆನಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ADVERTISEMENT

‘ಪ್ರತಿವಾದಿ ಕಂಪನಿಗಳು ಸಾರ್ವಜನಿಕರಿಂದ ಕೋಟ್ಯಂತರ ಮೊತ್ತವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗೆ ಪತ್ರಗಳನ್ನು ಬರೆದರೂ ಪ್ರಯೋಜನವಾಗಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.