ಬೆಂಗಳೂರು: ಟೊಮೆಟೊ ವ್ಯಾಪಾರಿಯೊಬ್ಬರಿಗೆ ನೋಟಿನೊಂದಿಗೆ ಬಿಳಿ ಹಾಳೆಯಿಟ್ಟು ವಂಚಿಸಿರುವ ಆರೋಪದಡಿ ಪಶ್ಚಿಮ ಬಂಗಾಳದ ಇಬ್ಬರು ತರಕಾರಿ ವ್ಯಾಪಾರಿಗಳ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪಶ್ಚಿಮ ಬಂಗಾಳದ ಸಿಲಿಗುರಿ ಎಪಿಎಂಸಿ ಮಾರುಕಟ್ಟೆಯ ಜಿ.ಸಂಜಯ್ ಹಾಗೂ ಜಿ.ಮುಖೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ಇಬ್ಬರು ವ್ಯಾಪಾರಿಗಳು ಒಟ್ಟು ₹32 ಲಕ್ಷ ವಂಚಿಸಿದ್ದಾರೆ’ ಎಂದು ಕೋಲಾರದ ಆದಿತ್ಯ ಶಾ ಅವರು ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ದೂರಿನಲ್ಲಿ ಏನಿದೆ?:
‘ದೂರುದಾರ ಹಾಗೂ ಅವರ ದೊಡ್ಡಪ್ಪ ವಿನೋದ್ ಶಾ ಅವರು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿದ್ದಾರೆ. ವಿನೋದ್ ಅವರ ಹೆಸರಿನಲ್ಲಿ ವ್ಯಾಪಾರ ಪರವಾನಗಿ ಇದ್ದು, ರೈತರಿಂದ ತರಕಾರಿ ಹಾಗೂ ಟೊಮೆಟೊ ಖರೀದಿಸಿ ಪಶ್ಚಿಮ ಬಂಗಾಳಕ್ಕೆ ರವಾನೆ ಮಾಡುತ್ತಿದ್ದಾರೆ. ತರಕಾರಿ ಖರೀದಿಸಿದ ಸಿಲಿಗುರಿ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿಗಳು ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದ್ದರು. ಕೆಲವೊಮ್ಮೆ ನಗದು ರೂಪದಲ್ಲಿ ಹಣ ನೀಡುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಜುಲೈ 10ರಂದು ಮುಖೇಶ್ ಅವರು ಕರೆ ಮಾಡಿ ಮೂರು ಲೋಡ್ ಟೊಮೆಟೊ ಕಳುಹಿಸುವಂತೆ ಕೋರಿದ್ದರು. ಟೊಮೆಟೊ ತಲುಪಿದ ಮೇಲೆ ವಿನೋದ್‌ಗೆ ಕರೆ ಮಾಡಿ, ಬೆಂಗಳೂರಿನ ಜಿ.ಸಂಜಯ್ ಅವರ ಬಳಿ ಹಣ ಕಳುಹಿಸಿರುವುದಾಗಿ ಹೇಳಿದ್ದರು. ಅವರು ವೈಟ್‌ಫೀಲ್ಡ್‌ನ ಹಗಡೂರಿನ ಬೇಕರಿ ಬಳಿ ಹಣ ನೀಡುವುದಾಗಿ ಮಾಹಿತಿ ನೀಡಿದ್ದರು. ಆದಿತ್ಯ ಶಾ ಅವರು ಹಣ ಪಡೆದುಕೊಳ್ಳಲು ಅಲ್ಲಿಗೆ ತೆರಳಿದ್ದರು. ಬೇಕರಿ ಬಳಿ ಸಂಜಯ್ ಅವರು, ₹20 ಲಕ್ಷ ಹಣವಿದೆ ಎಂದು ಹೇಳಿ, ₹ 500 ಮುಖಬೆಲೆಯ ಕಟ್ಟುಗಳನ್ನು ನೀಡಿದ್ದರು. ಹೆಚ್ಚಿನ ಜನರಿದ್ದ ಕಾರಣಕ್ಕೆ ಹಣವನ್ನು ಪರಿಶೀಲಿಸದೇ ಕೋಲಾರಕ್ಕೆ ತೆರಳಿದ್ದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ.
‘ಕೋಲಾರಕ್ಕೆ ತೆರಳಿದ ಬಳಿಕ ಬ್ಯಾಗ್ ತೆರೆದು ಹಣ ಎಣಿಕೆ ಮಾಡಲು ಮುಂದಾದ ವೇಳೆ ₹500 ಮುಖಬೆಲೆಯ ನೋಟುಗಳಂತೆ ಕಾಣುವ 10 ಕಟ್ಟುಗಳಿದ್ದವು. ಅದರಲ್ಲಿ ಕೆಲವು ಕಟ್ಟುಗಳ ಮೇಲೆ– ಕೆಳಗೆ ಮಾತ್ರ ಅಸಲಿ ನೋಟು ಇರಿಸಿ, ಮಧ್ಯದಲ್ಲಿ ಖಾಲಿ ಬಿಳಿ ಹಾಳೆ ಇರಿಸಿ ವಂಚನೆ ಎಸಗಿದ್ದಾರೆ’ ಎಂದು ದೂರು ನೀಡಲಾಗಿದೆ.
‘ಆರೋಪಿಗಳು ಮೊಬೈಲ್ ಸಹ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಟೊಮೆಟೊ ಖರೀದಿಸಿದ್ದ ₹20 ಲಕ್ಷ ಹಾಗೂ ಬಾಕಿಯಿರುವ ₹12 ಲಕ್ಷ ಪಾವತಿಸದೇ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.