ADVERTISEMENT

ಹಣ ದುಪ್ಪಟ್ಟು ಆಮಿಷ: ಸಿನಿಮಾ ನಿರ್ಮಾಪಕ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 19:56 IST
Last Updated 27 ಡಿಸೆಂಬರ್ 2018, 19:56 IST
ವಿಜಯಕುಮಾರ್
ವಿಜಯಕುಮಾರ್   

ಬೆಂಗಳೂರು: ಸಿನಿಮಾ ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಬಂಡವಾಳ ಹೂಡಿದರೆ ದುಪ್ಪಟ್ಟು ಆದಾಯ ಗಳಿಸಬಹುದೆಂದು ಹೇಳಿ ಇಬ್ಬರು ಉದ್ಯಮಿಗಳಿಂದ ₹1.5 ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ಸಿನಿಮಾ ನಿರ್ಮಾ‍‍ಪಕ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ಕೆ. ಸುಧಾಕರ್, ಆತನ ಸ್ನೇಹಿತರಾದ ನಲ್ಲಯನ್ ಪೀಟರ್ ಹಾಗೂ ವಿಜಯಕುಮಾರ್ ಬಂಧಿತರು.

‘ಸಿನಿಮಾ ನಿರ್ಮಾಪಕನೆಂದು ಪರಿಚಯಿಸಿಕೊಂಡಿದ್ದ ಸುಧಾಕರ್, ಸ್ನೇಹಿತರ ಜೊತೆ ಸೇರಿಕೊಂಡು ಉದ್ಯಮಿಗಳಾದ ಕೆ.ಟಿ. ದಿವ್ಯಶ್ರೀ ಹಾಗೂ ರಘು ಎಂಬುವರಿಂದ ಹಣ ಪಡೆದು ವಂಚಿಸಿದ್ದ. ಉದ್ಯಮಿಗಳು ನೀಡಿದ ದೂರಿನನ್ವಯ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ADVERTISEMENT

‘ವರ್ಧನ’, ‘ಕಥಾ ವಿಚಿತ್ರ’ ಹಾಗೂ ‘ಹುಲಿ ದುರ್ಗ’ ಸಿನಿಮಾ ನಿರ್ಮಿಸಿರುವುದಾಗಿ ಹೇಳುತ್ತಿದ್ದ ಸುಧಾಕರ್, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಪೇಟ’ ಸಿನಿಮಾದ ವಿತರಣೆ ಹಕ್ಕು ಪಡೆದಿರುವುದಾಗಿ ಉದ್ಯಮಿಗಳನ್ನು ನಂಬಿಸಿದ್ದ’.

‘ಮೈಸೂರು ರಸ್ತೆಯಲ್ಲಿ ಜಮೀನು ಖರೀದಿಸಿದ್ದು, ಅದನ್ನು ಅಭಿವೃದ್ಧಿಪಡಿಸುತ್ತಿದ್ದೇನೆ. ಈ ವ್ಯವಹಾರದಲ್ಲಿ ಹಣ ತೊಡಗಿಸಿದರೆ, ನಿಮಗೆ ಒಳ್ಳೆಯ ಲಾಭ ಬರಲಿದೆ. ಸಿನಿಮಾ ನಿರ್ಮಾಣ ಮತ್ತು ವಿತರಣೆಗಾಗಿ ಹೂಡಿಕೆ ಮಾಡಿದರೂ ಅಧಿಕ ಲಾಭ ಗಳಿಸಬಹುದು’ ಎಂದು ಹೇಳಿ ಸುಧಾಕರ್, ಉದ್ಯಮಿಗಳಿಂದ ಹಣ ಪಡೆದಿದ್ದ. ನಂತರ, ತಲೆಮರೆಸಿಕೊಂಡಿದ್ದ. ಮೊಬೈಲ್ ಕರೆಗಳ ವಿವರ ಸಂಗ್ರಹಿಸಿ ಆತ ಹಾಗೂ ಸ್ನೇಹಿತರನ್ನು ಸೆರೆ ಹಿಡಿಯಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.