ADVERTISEMENT

ವಂಚನೆ ಪ್ರಕರಣ: ಸಹೋದರಿ ವಿರುದ್ಧ ನಟಿ ಕಾರುಣ್ಯ ರಾಮ್ ದೂರು

ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದವರ ಹೆಸರು ದೂರಿನಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 14:37 IST
Last Updated 15 ಜನವರಿ 2026, 14:37 IST
<div class="paragraphs"><p>ಕಾರುಣ್ಯ ರಾಮ್ ಹಾಗೂ ಸಮೃದ್ಧಿ ರಾಮ್&nbsp;</p></div>

ಕಾರುಣ್ಯ ರಾಮ್ ಹಾಗೂ ಸಮೃದ್ಧಿ ರಾಮ್ 

   

ಬೆಂಗಳೂರು: ಮನೆಯಲ್ಲಿದ್ದ ಚಿನ್ನವನ್ನು ಕೊಂಡೊಯ್ದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸಹೋದರಿ ಸಮೃದ್ಧಿ ರಾಮ್‌ ಅವರ ವಿರುದ್ಧ ನಟಿ, ‘ಬಿಗ್‌ಬಾಸ್‌’ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಕಾರುಣ್ಯ ರಾಮ್ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ್ದವರ ವಿರುದ್ದವೂ ನಟಿ ದೂರು ದಾಖಲಿಸಿದ್ದಾರೆ.

‘ಸಹೋದರಿ ಸಮೃದ್ಧಿ ರಾಮ್‌ ಹಾಗೂ ಪತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್, ಸಾಗರ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ತಮ್ಮ ಸಹೋದರಿಗೆ ಸಾಲ ನೀಡಿದವರ ಪೈಕಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಸಂದೇಶ ಕಳುಹಿಸಿದ್ದರು ಎಂಬುದಾಗಿ ಕಾರುಣ್ಯ ತಿಳಿಸಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ತಂದೆ–ತಾಯಿ, ಸಹೋದರಿ ಜತೆಗೆ ಕಾರುಣ್ಯ ಅವರು ಆರ್.ಆರ್.ನಗರದಲ್ಲಿ ವಾಸವಿದ್ದರು. ಸಹೋದರಿ ಸಮೃದ್ಧಿ ರಾಮ್ ವಿರುದ್ಧ 2023ರಲ್ಲಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದರು. ಆಗ ಎನ್‌ಸಿಆರ್ ದಾಖಲಾಗಿತ್ತು. ಮನೆಯಲ್ಲಿದ್ದ ಸುಮಾರು ₹25 ಲಕ್ಷ ಮೌಲ್ಯದ ಚಿನ್ನ ಹಾಗೂ ಹಣವನ್ನು ಯಾರಿಗೂ ತಿಳಿಸದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬುದಾಗಿ ಮತ್ತೆ ದೂರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಸಮೃದ್ಧಿ ಅವರು ಬೊಟಿಕ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು. ಅಲ್ಲದೇ ಬೆಟ್ಟಿಂಗ್‌ನಲ್ಲೂ ₹25 ಲಕ್ಷ ಕಳೆದುಕೊಂಡಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಕುಟುಂಬದಿಂದ ಸಮೃದ್ಧಿ ಪ್ರತ್ಯೇಕವಾಗಿದ್ದರು. ಸಮೃದ್ಧಿಗೆ ಸಾಲ ನೀಡಿದವರು ನನ್ನ ಬಳಿ ಕೇಳುತ್ತಿದ್ದಾರೆ. ಮನೆಯ ಬಳಿಗೂ ಬಂದು ಗಲಾಟೆ ಮಾಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಅಶ್ಲೀಲವಾಗಿ ನಿಂದನೆ ಮಾಡುತ್ತಿದ್ದಾರೆ’ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

‘ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಫೋಟೊಗಳಿಗೂ ಕೆಟ್ಟದಾಗಿ ಪ್ರತಿಕ್ರಿಯೆ ಹಾಕಿದ್ದಾರೆ. ಎಲ್ಲ ವಿವರಗಳನ್ನೂ ಕಾರುಣ್ಯ ನೀಡಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಕಾರುಣ್ಯ ರಾಮ್ ಅವರು ವಜ್ರಕಾಯ, ಕಿರಗೂರಿನ ಗಯ್ಯಾಳಿಗಳು, ಪೆಟ್ರೊಮ್ಯಾಕ್ಸ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಸಮೃದ್ಧಿ ಅವರು ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ ಬೊಟಿಕ್ ಉದ್ಯಮ ಆರಂಭಿಸಿದ್ದರು.

ಬೆಟ್ಟಿಂಗ್‌ ಆ್ಯಪ್‌ನಿಂದ ತಂಗಿ ದೂರವಾಗಿದ್ದಾಳೆ: ಕಾರುಣ್ಯ

‘ಬೆಟ್ಟಿಂಗ್‌ ಆ್ಯಪ್‌ ಯಾರೂ ಬಳಸಬೇಡಿ. ಬಳಸುವಂತೆಯೂ ಪ್ರೋತ್ಸಾಹಿಸಬೇಡಿ. ಈ ಆ್ಯಪ್‌ಗಳಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ನಮ್ಮ ಕುಟುಂಬವು ಮಾನಸಿಕವಾಗಿ ಕುಗ್ಗಿದೆ. ಜನರ ಮುಗ್ಧತೆಯನ್ನು ಬಳಸಿಕೊಂಡು ಕುಟುಂಬಗಳನ್ನೇ ನಾಶಪಡಿಸಲಾಗುತ್ತಿದೆ. ನನ್ನ ಸಹೋದರಿ ಮೂರು ವರ್ಷದಿಂದ ಬೇರೆಯಾಗಿ ನೆಲಸಿದ್ದಾಳೆ. ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದರಿಂದ ನಗರ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದೇನೆ. ರಾಜ್ಯ ಸರ್ಕಾರವು ಬೆಟ್ಟಿಂಗ್‌ ಆ್ಯಪ್‌ ನಿಷೇಧಿಸಬೇಕು’ ಎಂದು ಕಾರುಣ್ಯ ರಾಮ್ ಅವರು ಪ್ರತಿಕ್ರಿಯಿಸಿದ್ದಾರೆ.

ಕಾರುಣ್ಯ ರಾಮ್ ಹಾಗೂ ಸಮೃದ್ಧಿ ರಾಮ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.