ADVERTISEMENT

ಅನಾಥ ಮಕ್ಕಳ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ವಂಚನೆ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 4:22 IST
Last Updated 23 ಏಪ್ರಿಲ್ 2023, 4:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅನಾಥ ಮಕ್ಕಳಿಗೆ ವಸತಿಸಹಿತ ಉಚಿತ ಶಿಕ್ಷಣ ನೀಡುತ್ತಿರುವುದಾಗಿ ಹೇಳಿ ಜನರಿಂದ ದೇಣಿಗೆ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಎನ್‌.ಬಿ. ಅಜಯ್ ಹಾಗೂ ಎನ್‌. ವೆಂಕಟಚಲಪತಿ ಬಂಧಿತರು. ಇಬ್ಬರಿಂದ 13 ಮೊಬೈಲ್, ಲ್ಯಾಪ್‌ಟಾಪ್, ಮಕ್ಕಳ ಫೋಟೊಗಳು ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಬೊಮ್ಮನಹಳ್ಳಿ ಬಳಿಯ ರೂಪೇನ್ ಅಗ್ರಹಾರದ ಎನ್‌ಜಿಆರ್ ಬಡಾವಣೆಯಲ್ಲಿರುವ ಅಕ್ಯೂಮೆನ್‌ಟ್ರಿಕ್ಸ್ ಕಂಪನಿ ಕಚೇರಿ ಮೇಲೆ ಇತ್ತೀಚೆಗೆ ದಾಳಿ ಮಾಡಲಾಗಿದೆ. ಕಚೇರಿಯ ಉಸ್ತುವಾರಿಗಳಾದ ಅಜಯ್ ಹಾಗೂ ವೆಂಕಟಚಲಪತಿಯನ್ನು ಬಂಧಿಸಲಾಗಿದೆ’ ಎಂದರು.

ADVERTISEMENT

ಹಲವು ಸಂಸ್ಥೆ ಹೆಸರು ಬಳಕೆ: ‘ಆದರಣೆ, ಚೈಲ್ಡ್ ಲೈಫ್ ಫೌಂಡೇಶನ್, ಕೇರ್ ಆ್ಯಂಡ್ ಲವ್, ಆಶಾ ಕುಟೀರ ಫೌಂಡೇಶನ್ ಹಾಗೂ ಡಬ್ಲ್ಯುಇ4 ಸೇವಾ ಸಂಸ್ಥೆಗಳ ಹೆಸರು ಬಳಸಿಕೊಂಡು ಆರೋಪಿಗಳು ದೇಣಿಗೆ ಸಂಗ್ರಹಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಲಾಗಿದೆ. ಶಿಕ್ಷಣ, ಊಟ, ವಸತಿ, ಆರೋಗ್ಯ ಹಾಗೂ ಇತರೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಮ್ಮ ಕೆಲಸಕ್ಕೆ ದೇಣಿಗೆ ಅಗತ್ಯವಿದ್ದು, ಸಹಾಯ ಮಾಡಿ’ ಎಂದು ಆರೋಪಿಗಳು ಜಾಹೀರಾತು ನೀಡುತ್ತಿದ್ದರು. ಇದಕ್ಕಾಗಿ ಕೆಲ ಮಕ್ಕಳ ಫೋಟೊಗಳನ್ನು ಬಳಸಿಕೊಳ್ಳುತ್ತಿದ್ದರು. ಆರೋಪಿಗಳ ಮಾತು ನಂಬಿ ಹಲವರು ದೇಣಿಗೆ ನೀಡುತ್ತಿದ್ದರು. ಅದೇ ಹಣವನ್ನು ಆರೋಪಿಗಳು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರು’ ಎಂದು ತಿಳಿಸಿದರು.

‘ಆರೋಪಿಗಳ ಕೃತ್ಯದ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು.  ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.