ಬೆಂಗಳೂರು: ‘ಬೆಂಗಳೂರು ಸ್ಮಾರ್ಟ್ ಸಿಟಿ’ ಯೋಜನೆ ವತಿಯಿಂದ ಗಾಂಧಿಬಜಾರ್‌ನಲ್ಲಿ ನಿರ್ಮಿಸಲಾಗಿರುವ ಬಹು ಅಂತಸ್ತಿನ ಕಾರ್ ಪಾರ್ಕಿಂಗ್ ಸಿದ್ಧಗೊಂಡಿದ್ದು, ಶೀಘ್ರವೇ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಶುಕ್ರವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿ, ‘ಉಪ ಮುಖ್ಯಮಂತ್ರಿಯವರ ಸಮಯ ನಿಗದಿಪಡಿಸಿಕೊಂಡು, ಬಹು ಅಂತಸ್ತಿನ ಕಾರ್ ಪಾರ್ಕಿಂಗ್ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.
₹22 ಕೋಟಿ ವೆಚ್ಚದಲ್ಲಿ ಬಹು ಅಂತಸ್ತಿನ ಕಾರ್ ಪಾರ್ಕಿಂಗ್ ನಿರ್ಮಾಣವಾಗಿದೆ. ತಳಮಹಡಿ ಹಾಗೂ ನೆಲಮಹಡಿಯಲ್ಲಿ ವ್ಯಾಪಾರಕ್ಕಾಗಿ 50 ಮಳಿಗೆಗಳನ್ನು ನಿರ್ಮಿಸಲಾಗಿದೆ. ಮೊದಲನೇ ಅಂತಸ್ತಿನಿಂದ ನಾಲ್ಕನೇ ಅಂತಸ್ತಿನವರೆಗೆ ಪ್ರತಿ ಅಂತಸ್ತಿಗೆ 31 ವಾಹನದಂತೆ, ಒಟ್ಟು 124 ವಾಹನಗಳ ನಿಲುಗಡೆಗೆ ಅವಕಾಶವಿದೆ. ಒಂದು ಲಿಫ್ಟ್, ಆರು ಶೌಚಾಲಯ, ಚಾವಣಿಯಲ್ಲಿ ಟೆನ್ಸೈಲ್ ರೂಫಿಂಗ್ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗಾಂಧಿಬಜಾರ್ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿ ಬೊಲಾರ್ಡ್ಸ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲಿಸಿ, ಸಮಗ್ರವಾಗಿ ಅಭಿವೃದ್ಧಿ ಮಾಡಿರುವುದಕ್ಕೆ ಮಹೇಶ್ವರ್ ರಾವ್ ಪ್ರಶಂಸೆ ವ್ಯಕ್ತಪಡಿಸಿದರು.
ಗಾಂಧಿಬಜಾರ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಗಡಿಗಳನ್ನು ನಿಗದಿಪಡಿಸಿದ್ದು, ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ತಡೆಯಬೇಕು. ಮಾರುಕಟ್ಟೆ ಆಕರ್ಷಕವಾಗಿ ಕಾಣಲು ಎಲ್ಲ ವ್ಯಾಪಾರಿಗಳಿಗೆ ಒಂದೇ ಮಾದರಿಯ ಛತ್ರಿಯನ್ನು ವಿನ್ಯಾಸಗೊಳಿಸಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಸ-ರಸ ಘಟಕ: ಕೋರಮಂಗಲದಲ್ಲಿರುವ ಕಸ-ರಸ ಘಟಕವನ್ನು ಮಾದರಿ ಸ್ಥಳವನ್ನಾಗಿ ರೂಪಿಸಬೇಕು. ಕಸ-ರಸ ಘಟಕದಲ್ಲಿ ಪುನರ್ಬಳಕೆ ಮಾಡಬಹುದಾದ ಸಾಮಗ್ರಿಗಳ ಸಂಗ್ರಹ ಘಟಕ, ಒಣತ್ಯಾಜ್ಯ ಸಂಗ್ರಹಣಾ ಘಟಕ, ಜೈವಿಕ ಅನಿಲ ಘಟಕ ಹಾಗೂ ಮಿನಿ ಟ್ರಾನ್ಸಫರ್ ಸ್ಟೇಷನ್ ಇದ್ದು, ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಹಾಗೂ ದುರ್ವಾಸನೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.
ವಲಯ ಆಯುಕ್ತ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತ ಡಾ. ಮಧು, ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, ಉಪ ಆಯುಕ್ತೆ ಗಗನಾ, ತೋಟಗಾರಿಕಾ ವಿಭಾಗದ ಉಪ ನಿರ್ದೇಶಕ ಚಂದ್ರಶೇಖರ್ ಉಪಸ್ಥಿತರಿದ್ದರು.
ಉದ್ಯಾನಗಳಲ್ಲಿ ಎಲೆ ಗೊಬ್ಬರ ತಯಾರಿಕಾ ಘಟಕ
ನಗರದ ಎಲ್ಲ ಉದ್ಯಾನಗಳಲ್ಲಿ ಎಲೆ ಗೊಬ್ಬರ ತಯಾರಿಕಾ ಘಟಕಗಳನ್ನು ನಿರ್ಮಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.
‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ದಕ್ಷಿಣ ವಲಯದ ಕಚೇರಿಯಲ್ಲಿ ನಾಗರಿಕರಿಂದ ದೂರು ಸ್ವೀಕರಿಸಿದ ಅವರು ಉದ್ಯಾನದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸಿ ಗೊಬ್ಬರ ಮಾಡಿ ಉದ್ಯಾನಗಳಿಗೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಮಳೆಗಾಲದಲ್ಲಿ ಮರಗಳು ಮರದ ಕೊಂಬೆ-ರೆಂಬೆಗಳು ಧರೆಗುರುಳುತ್ತವೆ. ಅವುಗಳನ್ನು ಆಯಾ ವಲಯಗಳಲ್ಲಿಯೇ ಪುಡಿ ಮಾಡಲು ವಲಯಕ್ಕೊಂದು ‘ಶೆಡ್ಡರ್’ ಯಂತ್ರಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿವಿ ಪುರದ ಸಜ್ಜನ್ ರಾವ್ ವೃತ್ತದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ. ಜೊತೆಗೆ ಪಾರಿವಾಳಗಳ ಹಾವಳಿ ಹೆಚ್ಚಿದ್ದು ಆ ಸಮಸ್ಯೆಯನ್ನು ಬಗೆಹರಿಸಲು ನಾಗರಿಕರು ಮನವಿ ಮಾಡಿದರು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಪರಿಶೀಲನಾ ವರದಿ ನೀಡಲು ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.