ADVERTISEMENT

ಸಾರ್ವಜನಿಕ ಗಣೇಶೋತ್ಸವ ಪರಿಷ್ಕೃತ ಮಾರ್ಗಸೂಚಿ

ಮೆರವಣಿಗೆ ನಿಷೇಧ: ವಿಗ್ರಹ ಎತ್ತರ 4 ಅಡಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 5:34 IST
Last Updated 20 ಆಗಸ್ಟ್ 2020, 5:34 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಹಿಂದೆ ಹೊರಡಿಸಿದ್ದ ಕೆಲವು ನಿಷೇಧಗಳನ್ನು ತೆರವುಗೊಳಿಸಿರುವ ಸರ್ಕಾರ, ಕೆಲವು ನಿರ್ಬಂಧಗಳನ್ನು ವಿಧಿಸಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಈ ಹಿಂದೆ ಸಾರ್ವಜನಿಕ ಗಣೇಶೋತ್ಸವಕ್ಕೆ ನಿಷೇಧ ಹೇರಲಾಗಿತ್ತು. ಮನೆ ಮತ್ತು ದೇವಸ್ಥಾನಗಳಲ್ಲಿ ಮಾತ್ರ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಲಾಗಿತ್ತು. ಕೆಲ ನಿರ್ಬಂಧ ವಿಧಿಸಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು.

ಹೊಸ ಆದೇಶದ ಪ್ರಕಾರ, ಮನೆ, ಸರ್ಕಾರಿ, ಖಾಸಗಿ ಅಥವಾ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಜನರು ಸೇರಿ ಉತ್ಸವ ಆಚರಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ ಹಾಗೂ ಮನೆಗಳಲ್ಲಿ 2 ಅಡಿ ಎತ್ತರ ಮೀರದಂತೆ ಗಣೇಶ ವಿಗ್ರಹ ಕೂರಿಸಬಹುದು ಎಂದು ಆದೇಶ ತಿಳಿಸಿದೆ. ಆದರೆ, ಗಣಪತಿ ವಿಗ್ರಹ ತರುವಾಗ ಮತ್ತು ವಿಸರ್ಜನೆ ಮಾಡುವಾಗ ಮೆರವಣಿಗೆ ಮಾಡುವುದಕ್ಕೆ ಇದ್ದ ನಿಷೇಧ ಮುಂದುವರಿದಿದೆ.

ADVERTISEMENT

ವಾರ್ಡ್‌ಗೆ ಒಂದು ಅಥವಾ ಗ್ರಾಮದಲ್ಲಿ ಒಂದು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದಾಗಿದೆ. ಇಂತಹ ಕಡೆಗಳಲ್ಲಿ ಕೇವಲ 20 ಜನ ಸೇರಿ ಆಚರಣೆ ಮಾಡಬಹುದು. ಇದಕ್ಕೆ ಸ್ಥಳೀಯ ಆಡಳಿತದ ಪೂರ್ವಾನುಮತಿ ಪಡೆಯಬೇಕು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಸರ್ಕಾರ ಅಥವಾ ಸ್ಥಳೀಯ ಆಡಳಿತ ನಿಗದಿ ಮಾಡಿದ ಸ್ಥಳದಲ್ಲೇ ವಿಗ್ರಹ ವಿಸರ್ಜನೆ ಮಾಡಬೇಕು. ಮನೆಗಳಲ್ಲಿ ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸಬೇಕು ಎಂದೂ ಮಾರ್ಗಸೂಚಿ ತಿಳಿಸಿದೆ.

ಬಿಎಸ್‌ವೈ ಮನವಿ:ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಕೊರೊನಾಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಆದ್ದರಿಂದ, ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.