ADVERTISEMENT

ಗಣೇಶ ಮೂರ್ತಿ ವಿಸರ್ಜನೆಗೆ ಕೃತಕ ಕೆರೆ ನಿರ್ಮಿಸಿ: ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 20:04 IST
Last Updated 18 ಜೂನ್ 2019, 20:04 IST
   

ಬೆಂಗಳೂರು: ‘ಗಣೇಶನ ವಿಗ್ರಹ ಅಥವಾ ಬೇರಾವುದೇ ವಿಧದ ವಿಗ್ರಹಗಳನ್ನು ಕೆರೆಗಳಲ್ಲಿ ವಿಸರ್ಜಿಸಬಾರದು. ಅದಕ್ಕಾಗಿ ಕೃತಕ ಕೆರೆಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಟ್ಟೆಚ್ಚರ ವಹಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ಬಿಬಿಎಂಪಿ ವ್ಯಾಪ್ಯಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು’ ಎಂದು ಕೋರಿ ‘ಸಿಟಿಜನ್ಸ್‌ ಆ್ಯಕ್ಷನ್‌ ಗ್ರೂಪ್‌’ ಕಾರ್ಯದರ್ಶಿ ನೊಮಿತಾ ಚಾಂಡಿ, ‘ಜೆ.ಪಿ ನಗರ 4ನೇ ಹಂತದ ಡಾಲರ್ಸ್‌ ಲೇಔಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ದ ಕಾರ್ಯದರ್ಶಿ ಗುಂಡಾ ಭಟ್‌ ಮತ್ತು ‘ಸಮರ್ಪಣಾ’ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೇಲಿನ ಮಧ್ಯಂತರ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

‘ಮೂರ್ತಿಗಳ ವಿಸರ್ಜನೆ ಕುರಿತು ಕೇಂದ್ರ ಪರಿಸರ ಮಾಲಿನ್ಯ ಮಂಡಳಿ ಹೊರಡಿಸಿರುವ ಮಾರ್ಗಸೂಚಿ ಅನ್ವಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಪಿಎಸ್‌ಸಿ) ಹೊರಡಿಸಿರುವ ಆದೇಶ ಜಾರಿಗೊಳ್ಳಬೇಕು. ಈ ಬಗೆಗಿನ ಮಾರ್ಗಸೂಚಿಗಳನ್ನು ವ್ಯಾಪಕ ಪ್ರಚಾರದ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ಒಂದು ವೇಳೆ ಯಾರಾದರೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕ್ರಿಮಿನಲ್ ಕ್ರಮ ಜರುಗಿಸಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿತು.

ADVERTISEMENT

‘ಈಗಾಗಲೇ ತೆರವಾಗಿರುವ ರಾಜಕಾಲುವೆಗಳು ಪುನಃ ಒತ್ತುವರಿ ಅಥವಾ ಅತಿಕ್ರಮಣ ಆಗದಂತೆ ನೋಡಿಕೊಳ್ಳುವ ದಿಸೆಯಲ್ಲಿ ಬಿಬಿಎಂಪಿ ಆರು ವಾರಗಳಲ್ಲಿ ಸಮಗ್ರ ಯೋಜನೆಯೊಂದನ್ನು ರೂಪಿಸಬೇಕು. ಪಾಲಿಕೆ ಸರ್ವೇ ವರದಿಯನ್ನು ಸ್ವೀಕರಿಸಿದ ಆರು ವಾರಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸಬೇಕು’ ಎಂದೂ ನ್ಯಾಯಪೀಠ ಆದೇಶಿಸಿದ್ದು, ವಿಚಾರಣೆಯನ್ನು ಆಗಸ್ಟ್‌ 5ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.