ADVERTISEMENT

ಅತ್ತೆ ಮನೆಯಲ್ಲಿ ಗಾಂಜಾ ಬಚ್ಚಿಟ್ಟಿದ್ದ ರೌಡಿ ಸೈಯದ್ ಅಸ್ಗರ್ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 20:45 IST
Last Updated 12 ಜನವರಿ 2023, 20:45 IST
ಸೈಯದ್ ಅಸ್ಗರ್
ಸೈಯದ್ ಅಸ್ಗರ್   

ಬೆಂಗಳೂರು: ಒಡಿಶಾದಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಆರೋಪದಡಿ ರೌಡಿ ಸೈಯದ್ ಅಸ್ಗರ್ ಅಲಿಯಾಸ್ ಅಜ್ಜುನನ್ನು (34) ಜಗಜೀವನರಾಮ್‌ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ‍ಪಾದರಾಯನಪುರ ನಿವಾಸಿ ಸೈಯದ್ ಅಸ್ಗರ್, ಹಲವು ವರ್ಷಗಳಿಂದ ಅಪರಾಧ ಕೃತ್ಯ ಎಸಗುತ್ತಿದ್ದ. ಕೆಲ ವರ್ಷಗಳಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದ’ ಎಂದು ಪೊಲೀಸರು ಹೇಳಿದರು.

‘ಇತ್ತೀಚೆಗೆ ಒಡಿಶಾಕ್ಕೆ ಹೋಗಿದ್ದ ಆರೋಪಿ, ಅಲ್ಲಿಂದ ಗಾಂಜಾ ತೆಗೆದುಕೊಂಡು ನಗರಕ್ಕೆ ಬಂದಿದ್ದ. ಮಧ್ಯವರ್ತಿಗಳ ಮೂಲಕ ಗಾಂಜಾ ಮಾರಲು ತಯಾರಿ ನಡೆಸಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನಿಂದ 22 ಕೆ.ಜಿ 928 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಜಗಜೀವನರಾಮ್ ನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಅಸ್ಗರ್ ಹೆಸರಿತ್ತು. ಈತನ ಮೇಲೆ ನಿಗಾ ಇರಿಸಲಾಗಿತ್ತು. ಗಾಂಜಾ ಮಾರಾಟದ ವೇಳೆ ಪೊಲೀಸರು ತನ್ನನ್ನು ಬಂಧಿಸಬಹುದೆಂದು ಆರೋಪಿ ಅಂದುಕೊಂಡಿದ್ದ. ಹೀಗಾಗಿ, ಒಡಿಶಾದಿಂದ ತಂದಿದ್ದ ಗಾಂಜಾವನ್ನು ಗುರಪ್ಪನಪಾಳ್ಯದಲ್ಲಿರುವ ಅತ್ತೆ ಮನೆಯಲ್ಲಿ ಇರಿಸಿದ್ದ.’

‘ಆರೋಪಿಯನ್ನು ಬಂಧಿಸಿದಾಗ ಕೇವಲ 2 ಕೆ.ಜಿ ಗಾಂಜಾ ಮಾತ್ರ ಸಿಕ್ಕಿತ್ತು. ವಿಚಾರಣೆ ನಡೆಸಿದಾಗ, ಅತ್ತೆ ಮನೆಯಲ್ಲಿ ಗಾಂಜಾ ಇರಿಸಿದ್ದ ಸಂಗತಿ ತಿಳಿಯಿತು. ನಂತರ, ಮನೆಯಲ್ಲಿ ಶೋಧ ನಡೆಸಿ ಉಳಿದ ಗಾಂಜಾವನ್ನು ಜಪ್ತಿ ಮಾಡಲಾಯತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.