ADVERTISEMENT

ಲಾಲ್‌ಬಾಗ್ | ಸಸ್ಯಕಾಶಿಯಲ್ಲಿ ಕಸದ ರಾಶಿ: ಪುಷ್ಪ ಪ್ರದರ್ಶನದ ನಂತರ ತ್ಯಾಜ್ಯ ದರ್ಶನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:29 IST
Last Updated 16 ಆಗಸ್ಟ್ 2022, 21:29 IST
ತಂಪು ಪಾನೀಯದ ಸ್ಯಾಶೆ ಹಸಿರು ಹುಲ್ಲಿಗೇ ಹೊದಿಕೆ
ತಂಪು ಪಾನೀಯದ ಸ್ಯಾಶೆ ಹಸಿರು ಹುಲ್ಲಿಗೇ ಹೊದಿಕೆ   

ಬೆಂಗಳೂರು: ಎತ್ತ ನೋಡಿದರೂ ಚೆಲ್ಲಾಪಿಲ್ಲಿಯಾಗಿ ಹರಡಿದ ಕಸ, ನಡೆದಲ್ಲೆಲ್ಲಾ ಕಾಲಿಗೆ ಸಿಗುವ ಪ್ಲಾಸ್ಟಿಕ್ ಕವರ್‌ಗಳು, ಕಾಗದದ ಚೂರುಗಳು, ತಿಂದು ಬಿಸಾಡಿದ ದೊನ್ನೆಗಳ ರಾಶಿ...

ಇದು ಲಾಲ್‌ಬಾಗ್‌ನ ಮಂಗಳವಾರ ಬೆಳಗಿನ ಸ್ಥಿತಿ. ಆಗಸ್ಟ್‌ 5ರಿಂದ ಆರಂಭವಾದ ಫಲಪುಷ್ಪ ಪ್ರದರ್ಶನ 11 ದಿನಗಳ ಕಾಲ ಯಶಸ್ವಿಯಾಗಿ ನಡೆದಿದ್ದು, ಸೋಮವಾರ(ಆ.15) ಸಮಾಪ್ತಿಗೊಂಡಿತು. ಮಂಗಳವಾರ ಮುಂಜಾನೆ ಲಾಲ್‌ಬಾಗ್‌ಗೆ ಕಾಲಿಟ್ಟರೆ ಎಲ್ಲೆಲ್ಲೂ ಕಸವೋ ಕಸ. ವಾಯುವಿಹಾರಿಗಳು ಸಾಗುವ ರಸ್ತೆ, ಪಾದಚಾರಿಮಾರ್ಗಗಳು, ಉದ್ಯಾನದ ಹಸಿರು ಹೊದಿಕೆ, ಲಾಲ್‌ಬಾಗ್‌ನ ಹೊರಗಿನ ಬಸ್‌ ತಂಗುದಾಣಗಳ ಆಸುಪಾಸು...ಎಲ್ಲೆಲ್ಲೂ ಜನರು ಬಿಸಾಡಿಹೋದ ತ್ಯಾಜ್ಯದ ರಾಶಿ.

ಫಲಪುಷ್ಪ ಪ್ರದರ್ಶನಗೊಂಡಿದ್ದ ಗಾಜಿನ ಮನೆಯ ಸುತ್ತ ಕಾಲಿಡಲೂ ಜಾಗವಿಲ್ಲದಷ್ಟು ಕಸ. ಎದುರಿಗಿದ್ದ ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಲಾಗಿದ್ದು, ಅವುಗಳಲ್ಲಿ ಇದ್ದ ಕಸವನ್ನೆಲ್ಲ ಅಲ್ಲಿಯೇ ಹರಡಿ ಹೋಗಿದ್ದರು.

ADVERTISEMENT

ಇನ್ನು ಆಹಾರ ಪದಾರ್ಥ ಸೇವಿಸಿದವರು ಪೇಪರ್ ಪ್ಲೇಟ್, ದೊನ್ನೆಗಳು, ಅಡಿಕೆ ತಟ್ಟೆಗಳನ್ನು ಮರದ ಬುಡಗಳ ಬಳಿ ರಾಶಿ ಹಾಕಿ ಹೋಗಿದ್ದಾರೆ. ಅಧಿಕೃತವಾಗಿ ಫಲಪುಷ್ಪ ಪ್ರದರ್ಶನ ಸೋಮವಾರಕ್ಕೆ ಮುಕ್ತಾಯವಾಗಿದ್ದರೂ, ಮಂಗಳವಾರವೂ ಜನ ಭೇಟಿ ನೀಡಿದ್ದರು. ಗಾಜಿನ ಮನೆಯಲ್ಲಿ ರಾಜ್‌ಕುಮಾರ್ ಮತ್ತು ಪುನಿತ್‌ರಾಜ್‌ಕುಮಾರ್ ಪ್ರತಿಮೆಗಳನ್ನು ಕಂಡು ಪುಳಕಿತರಾಗುತ್ತಿದ್ದರು. ಹೊರಗೆ ಬಂದರೆ ಬಿದ್ದಿರುವ ಕಸ ನೋಡಿ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು.

‘ಲಾಲ್‌ಬಾಗ್ ಅನ್ನು ಈ ರೀತಿ ನೋಡಲು ಅತ್ಯಂತ ಬೇಸರವಾಗುತ್ತಿದೆ. ಅದನ್ನು ಹಾಳು ಮಾಡುವ ಪ್ರಯತ್ನವನ್ನು ಯಾರೂ ಮಾಡಬಾರದು. ಇದೊಂದು ಹೇಯ ಕೃತ್ಯ’ ಎಂದು ಬೆಳ್ಳಂದೂರಿನ ಅನುರಾಧ ನೋವಿನಿಂದ ನುಡಿದರು.

‘ಪರಿಸರ ಹಾಳು ಮಾಡಿದವರು ಪ್ರಾಣಿಗಳಿಗಿಂತಲೂ ಕಡೆ’
‘ಲಾಲ್‌ಬಾಗ್ ಅತ್ಯಂತ ಸುಂದರವಾದ ತಾಣ. ಈ ಪರಿಸರವನ್ನು ಹಾಳುವ ಮಾಡುವ ಮೊದಲು ಜನ ಯೋಚನೆ ಮಾಡಬೇಕು. ಯಾವುದೇ ಪ್ರಾಣಿಗಳು ಕೂಡ ಈ ರೀತಿ ಪರಿಸರವನ್ನು ಹಾಳು ಮಾಡಲಾರವು. ಕಸ ಬಿಸಾಡಿರುವವರು ಪ್ರಾಣಿಗಳಿಗಿಂತ ಕಡೆ’ ಎಂದು ಮಂಗಳವಾರ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ಪ್ರವೀಣ್ ಡಿಸಿಲ್ವ ಅಸಮಾಧಾನ ವ್ಯಕ್ತಪಡಿಸಿದರು.

‘ಇದು ನಾಗರಿಕ ನಡವಳಿಕೆಯಲ್ಲ’
‘ಗಾಜಿನ ಮನೆಯೊಳಗಿನ ಪುಷ್ಪಾಲಂಕಾರ, ಪುನೀತ್‌ರಾಜ್ ಮತ್ತು ರಾಜ್‌ಕುಮಾರ್ ಪ್ರತಿಮೆಗಳನ್ನು ನೋಡಿ ಖುಷಿ ಆಯಿತು. ಆದರೆ, ಹೊರಗೆ ಬಿದ್ದಿರುವ ಕಸ ನೋಡಿದರೆ ಮನಸಿಗೆ ನೋವಾಗುತ್ತದೆ’ ಎಂದು ಲಗ್ಗೆರೆಯ ಮಂಜುಳಾ ಹೇಳಿದರು.

‘ಅಲ್ಲಲ್ಲಿ ಕಸದ ಡಬ್ಬಗಳಿವೆ. ಅಲ್ಲಿಗೆ ಕಸ ಹಾಕಬೇಕು. ಅದನ್ನು ಬಿಟ್ಟು ತಿಂದು ಈ ರೀತಿ ಎಲ್ಲೆಂದರಲ್ಲಿ ಬಿಸಾಡುವುದು ನಾಗರಿಕ ನಡವಳಿಕೆ ಅಲ್ಲ. ತೋಟಗಾರಿಕೆ ಇಲಾಖೆಯವರು ಕಸ ತೆಗೆಯುತ್ತಿದ್ದಾರೆ. ಸಂಪೂರ್ಣ ಸ್ವಚ್ಛಗೊಳ್ಳಲು ಇನ್ನೂ ಎರಡು –ಮೂರು ದಿನ ಬೇಕಾಗಬಹುದು’ ಎಂದರು.

‘ಸ್ವಚ್ಛತೆ ಕಾರ್ಯ ಆರಂಭ’
‘ಕಸದ ರಾಶಿ ತೆಗೆಯುವ ಕೆಲಸವನ್ನು ಸೋಮವಾರ ಸಂಜೆಯಿಂದಲೇ ಲಾಲ್‌ಬಾಗ್ ಸಿಬ್ಬಂದಿ ಆರಂಭಿಸಿದ್ದಾರೆ’ ಎಂದು ಲಾಲ್‌ಬಾಗ್ ಉಪನಿರ್ದೇಶಕಿ ಕುಸುಮಾ ಹೇಳಿದರು.

‘ಲಕ್ಷಾಂತರ ಜನ ಬಂದಿದ್ದರಿಂದ ಕಸ ಹರಡಿಕೊಂಡಿದೆ. ಮಧ್ಯರಾತ್ರಿ 1 ಗಂಟೆ ತನಕವೂ ನಮ್ಮ ಸಿಬ್ಬಂದಿ ಸ್ವಚ್ಛತೆ ಕಾರ್ಯ ನಡೆಸಿದರು. ಒಂದು ದಿನದಲ್ಲಿ ಬಹುತೇಕ ಸರಿಯಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.