ADVERTISEMENT

ಬೆಂಗಳೂರು: ರಾಜಕಾಲುವೆ ಸೇರುತ್ತಿದೆ ಕಸ ಸಂಸ್ಕರಣ ಘಟಕದ ಕೊಳೆ

ಕಸ ಸಾಗಣೆ ಟ್ರಕ್‌ ಅಡ್ಡಗಟ್ಟಿ ಚಿಕ್ಕನಾಗಮಂಗಲ ಗ್ರಾಮಸ್ಥರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 20:25 IST
Last Updated 11 ಜುಲೈ 2020, 20:25 IST
ಚಿಕ್ಕನಾಗಮಂಗಲ ಬಳಿಯ ರಾಜಕಾಲುವೆಯಲ್ಲಿ ಸಂಗ್ರಹವಾಗಿರುವ ಕಲುಷಿತ ನೀರು.
ಚಿಕ್ಕನಾಗಮಂಗಲ ಬಳಿಯ ರಾಜಕಾಲುವೆಯಲ್ಲಿ ಸಂಗ್ರಹವಾಗಿರುವ ಕಲುಷಿತ ನೀರು.   

ಬೆಂಗಳೂರು: ಪಾಲಿಕೆಯ ಕಸ ಸಂಸ್ಕರಣಾ ಘಟಕದಿಂದ ರಾಜಕಾಲುವೆಗೆ ಕಲುಷಿತ ನೀರು ಬಿಟ್ಟಿರುವುದನ್ನು ವಿರೋಧಿಸಿ ಚಿಕ್ಕನಾಗಮಂಗಲ ಗ್ರಾಮಸ್ಥರು ಕಸ ಹೊತ್ತು ತರುವ ಟ್ರಕ್‍ಗಳಿಗೆ ಅಡ್ಡಗಟ್ಟಿ ಶನಿವಾರ ಪ್ರತಿಭಟನೆ ನಡೆಸಿದರು.

ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಗ್ರಾಮದ ಬಳಿ 30 ಎಕರೆ ಪ್ರದೇಶದಲ್ಲಿರುವ ಕಸ ಸಂಸ್ಕರಣಾ ಘಟಕವಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ದುರ್ವಾಸನೆ ಹೆಚ್ಚಾಗಿತ್ತು. ಈ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಘಟಕದ ಕಲುಷಿತ ನೀರು ರಾಜಕಾಲುವೆ ಮೂಲಕ ಕೆರೆಗೆ ಹರಿಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಹಾಗಾಗಿ ಗ್ರಾಮಸ್ಥರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ಪೊಲೀಸರು ಅನುಮತಿ ಪಡೆಯದೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರನ್ನು ಗದರಿದರು. ಇದಕ್ಕೆ ಪ್ರತಿಭಟನಾಕಾರರು ಸೊಪ್ಪು ಹಾಕಲಿಲ್ಲ.

ADVERTISEMENT

'2018ರಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕದಲ್ಲಿ ಬೆಂಗಳೂರಿನ 44 ವಾರ್ಡ್‍ಗಳ ತ್ಯಾಜ್ಯ ಸಂಸ್ಕರಣೆಯಾಗುತ್ತದೆ. ಘಟಕದಲ್ಲಿ ಮಿಶ್ರ ಕಸ ಸಂಸ್ಕರಣೆ ಮಾಡದಂತೆ 2019ರ ಜುಲೈನಲ್ಲಿ ಹಸಿರು ನ್ಯಾಯಮಂಡಳಿ (ಎನ್‍ಜಿಟಿ) ನಿರ್ದೇಶನ ನೀಡಿದೆ. ಆದರೂ ಇಲ್ಲಿ ಮಿಶ್ರ ಕಸ ಸಂಸ್ಕರಣೆ ಮಾಡಲಾಗುತ್ತಿದೆ' ಎಂದು ಸ್ಥಳೀಯ ನಿವಾಸಿ ದೀಪು ಚಂದ್ರನ್ ದೂರಿದರು.

'ಘಟಕಕ್ಕೆ ಅನಧಿಕೃತ ವಾಹನಗಳಲ್ಲಿ ಕಸ ಸಾಗಿಸುತ್ತಿರುವ ಅನುಮಾನವಿದೆ. ಘಟಕದ ಕಲುಷಿತ ನೀರಿನಿಂದಾಗಿ ರಾಜಕಾಲುವೆ ನೀರು ಕೂಡಾ ಕಲುಷಿತಗೊಂಡಿದೆ. ದುರ್ವಾಸನೆಯಿಂದಾಗಿ ಸಮೀಪದ ಮನೆಗಳಲ್ಲಿ ವಾಸಿಸಲಾಗದ ಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳು ಸ್ಪಂದಿಸದ ಕಾರಣ ಗ್ರಾಮಸ್ಥರೆಲ್ಲ ಒಗ್ಗೂಡಿ ಪ್ರತಿಭಟನೆಗೆ ಮುಂದಾದೆವು' ಎಂದು ಸ್ಥಳೀಯ ನಿವಾಸಿ ಸಿ.ಶ್ರೀಧರ್ ವಿವರಿಸಿದರು.

'ತ್ಯಾಜ್ಯ ಹೊತ್ತು ಬರುವ ವಾಹನಗಳು ಗ್ರಾಮದಲ್ಲಿ ಸಂಚರಿಸುತ್ತವೆ. ಅವುಗಳ ಕೊಳೆನೀರು ರಸ್ತೆಯುದ್ದಕ್ಕೂ ಚೆಲ್ಲುತ್ತಿದ್ದು, ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ. ಕಲುಷಿತ ನೀರು ಕೆರೆ ಒಡಲು ಸೇರುತ್ತಿದ್ದು, ಜಾನುವಾರುಗಳಿಗೂ ತೊಂದರೆ ಉಂಟಾಗುತ್ತಿದೆ. ಘಟಕದಿಂದ ಕಲುಷಿತ ನೀರು ಹೊರಗೆ ಹರಿಯದಂತೆ ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿದರು.

'ಪ್ರತಿಭಟನೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು, ಪಾಲಿಕೆ ಜಂಟಿ ಆಯುಕ್ತರ ಜತೆಗೆ ಈ ವಿಚಾರವಾಗಿ ಸೋಮವಾರ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪ್ರತಿಭಟನೆಯೂ ಮುಂದುವರಿಯಲಿದೆ' ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.