ADVERTISEMENT

ಗ್ಯಾಸ್‌ ಪೈಪ್‌ನಿಂದ ಸೋರಿಕೆ; ಆತಂಕ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:06 IST
Last Updated 5 ಜನವರಿ 2019, 20:06 IST
ಗ್ಯಾಸ್‌ ಪೈಪ್‌ ಒಡೆದಿದ್ದ ಜಾಗ
ಗ್ಯಾಸ್‌ ಪೈಪ್‌ ಒಡೆದಿದ್ದ ಜಾಗ   

ಬೆಂಗಳೂರು: ಎಚ್‌ಎಸ್ಆರ್‌ ಲೇಔಟ್‌ನಲ್ಲಿ ಅಳವಡಿಸಿರುವ ಗ್ಯಾಸ್‌ ಪೈಪ್‌ ಒಡೆದು ಅನಿಲ ಸೋರಿಕೆಯಾಗಿದ್ದರಿಂದ, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಒಂದನೇ ಹಂತದ 11ನೇ ಮುಖ್ಯರಸ್ತೆಯ 22ನೇ ಅಡ್ಡರಸ್ತೆಯ ನೆಲದಡಿ ‘ಗೇಲ್‌’ ಕಂಪನಿಯಿಂದ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಲಾಗಿದೆ. ಅದೇ ಜಾಗದಲ್ಲಿಕಾರ್ಮಿಕರು, ಶನಿವಾರ ಯಂತ್ರ ಮೂಲಕ ಏರ್‌ಟೆಲ್‌ ಮೊಬೈಲ್ ಕಂಪನಿಯ ಕೇಬಲ್ ಅಳವಡಿಸುತ್ತಿದ್ದರು.

‘ರಾತ್ರಿ 7.30ರ ಸುಮಾರಿಗೆ ನೆಲದಡಿಯಲ್ಲಿದ್ದ ಗ್ಯಾಸ್‌ನ ಪೈಪ್‌ಗೆ ಹಾನಿಯಾಗಿತ್ತು. ನಂತರ, ಗ್ಯಾಸ್‌ ಸೋರಿಕೆಯಾಗಿ ವಾಸನೆ ಬರಲಾರಂಭಿಸಿತ್ತು. ಗಾಬರಿಗೊಂಡ ಜನ, ಮನೆಯಿಂದ ಹೊರಗೆ ಬಂದು ನಿಂತುಕೊಂಡರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ADVERTISEMENT

‘ಸ್ಥಳದಲ್ಲಿ ಗ್ಯಾಸ್‌ ಮಾತ್ರ ಸೋರಿಕೆಯಾಗುತ್ತಿತ್ತು. ಬೆಂಕಿ ಹೊತ್ತಿಕೊಂಡಿರಲಿಲ್ಲ. ಅಗ್ನಿಶಾಮಕ ದಳದ ಸರ್ಜಾಪುರ ಠಾಣೆಯ ಸಿಬ್ಬಂದಿ, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಗೇಲ್‌ ಕಂಪನಿ ಸಿಬ್ಬಂದಿ, ಸೋರಿಕೆಯಾಗುತ್ತಿದ್ದ ಪೈಪ್‌ ಬದಲಾಯಿಸಿ ಹೊಸ ಪೈಪ್‌ ಅಳವಡಿಸಿದರು’ ಎಂದರು.

ಪೊಲೀಸರಿಗೆ ದೂರು: ‘ಗ್ಯಾಸ್‌ ಪೈಪ್‌ಲೈನ್ ಇರುವ ಜಾಗದಲ್ಲಿ ‘ಪೈಪ್‌ಲೈನ್ ಇದೆ. ಎಚ್ಚರಿಕೆ’ ಎಂಬ ಫಲಕ ಹಾಕಲಾಗಿದೆ. ಏರ್‌ಟೆಲ್ ಕಂಪನಿಯವರು ಅನುಮತಿ ಪಡೆಯದೇ ಕೇಬಲ್ ಅಳವಡಿಸುವುದಕ್ಕಾಗಿ ರಸ್ತೆ ಅಗೆಯುತ್ತಿದ್ದರು. ಅವರ ನಿರ್ಲಕ್ಷ್ಯದಿಂದ ಪೈಪ್‌ ಒಡೆದಿರುವುದಾಗಿ ಗೇಲ್‌ ಅಧಿಕಾರಿಗಳು ಆರೋಪಿಸುತ್ತಿದ್ದಾರೆ’ ಎಂದು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಹೇಳಿದರು.

‘ಗೇಲ್ ಅಧಿಕಾರಿಗಳಿಂದ ದೂರು ಪಡೆಯಲಾಗಿದೆ. ಏರ್‌ಟೆಲ್ ಕಂಪನಿ ಪ್ರತಿನಿಧಿ ಹಾಗೂ ಕಾರ್ಮಿಕರನ್ನು ವಿಚಾರಣೆ ನಡೆಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.