ಬೆಂಗಳೂರು: ಐದು ನಗರ ಪಾಲಿಕೆಗಳಲ್ಲಿ ರಸ್ತೆಗಳು ಹಾಗೂ ಬೃಹತ್ ನೀರುಗಾಲುವೆಗಳ ನಿರ್ವಹಣೆಗಾಗಿ ಕೂಡಲೇ ಗುತ್ತಿಗೆದಾರರನ್ನು ನೇಮಿಸಿಕೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.
ನಗರ ಪಾಲಿಕೆಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಆಯುಕ್ತರೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ಕೇಂದ್ರೀಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ನಿರ್ವಹಣಾ ತಂಡಗಳನ್ನು ರದ್ದುಪಡಿಸಬೇಕು. ಆಯಾ ಪಾಲಿಕೆಗಳ ವ್ಯಾಪ್ತಿಗೆ ಅನುಗುಣವಾಗಿ ಹೊಸ ಗುತ್ತಿಗೆದಾರರನ್ನು ನೇಮಿಸಿಕೊಳ್ಳಬೇಕು ಎಂದರು.
ರಸ್ತೆ ಮೂಲಸೌಕರ್ಯ, ಕಟ್ಟಡಗಳು, ಬೃಹತ್ ನೀರುಗಾಲುವೆ, ಕೆರೆಗಳು ಸೇರಿದಂತೆ ವಿವಿಧ ವಿಭಾಗಳ ಕೇಂದ್ರೀಕೃತ ಕಚೇರಿಗಳಿಂದ ಕಡತಗಳನ್ನು ಸಂಬಂಧಪಟ್ಟ ಆಯಾ ನಗರ ಪಾಲಿಕೆಗಳಿಗೆ ಹಸ್ತಾಂತರ ಮಾಡುವ ಸಲುವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ, ತ್ವರಿತವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದರು.
ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಲು ಸಹಾಯವಾಣಿ 1533 ಅನ್ನು ಜಿಬಿಎ ನಿರ್ವಹಿಸಲಿದೆ. ಐದು ನಗರ ಪಾಲಿಕೆಗಳ ಕೇಂದ್ರ ಕಚೇರಿ, ನಿಯಂತ್ರಣ ಕೊಠಡಿಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಬೇಕು ಎಂದು ಐದೂ ನಗರ ಪಾಲಿಕೆಗಳ ಆಡಳಿತಾಧಿಕಾರಿಯೂ ಆಗಿರುವ ಮಹೇಶ್ವರ್ ಸೂಚಿಸಿದರು.
ಆಯಾ ನಗರ ಪಾಲಿಕೆಗಳ ಕಚೇರಿಗಳಿಗಾಗಿ ಕಟ್ಟಡಗಳನ್ನು ನಿರ್ಮಿಸಲು ಸೂಕ್ತ ಖಾಲಿ ಜಾಗಗಳನ್ನು ಗುರುತಿಸಬೇಕು. ಆ ಬಳಿಕ ಲಭ್ಯವಿರುವ ಜಾಗ ಮತ್ತು ಕಚೇರಿ ಸ್ಥಳದ ಅವಶ್ಯಕತೆ ಆಧರಿಸಿ, ಹೊಸ ಪಾಲಿಕೆ ಕಟ್ಟಡಗಳ ವಿನ್ಯಾಸಗಳನ್ನು ಅಂತಿಮಗೊಳಿಸಬೇಕು ಎಂದರು.
ಜಿಬಿಎ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಸುಮಾರು 35,000 ಮಕ್ಕಳನ್ನು ಗುರುತಿಸಲಾಗಿದ್ದು, ಆಯಾ ನಗರ ಪಾಲಿಕೆಗಳಲ್ಲಿ ಎಷ್ಟು ಮಕ್ಕಳು ಬರಲಿದ್ದಾರೆ ಎಂಬ ಪಟ್ಟಿಯನ್ನು ನೀಡಲಾ
ಗುವುದು. ಅದಕ್ಕಾಗಿ ವಾರ್ಡ್ ಹಾಗೂ ಪಾಲಿಕೆಗಳಲ್ಲಿ ಕಾರ್ಯಪಡೆ ರಚಿಸಿ, ಎಲ್ಲರನ್ನು ಪುನಃ ಶಾಲೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ಡಿ.ಎಸ್. ರಮೇಶ್, ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್. ರಮೇಶ್ , ಡಾ. ಕೆ.ವಿ. ರಾಜೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.